ಬೆಂಗಳೂರು, ನ.21 www.bengaluruwire.com: ನಗರದ ಸಂಚಾರ ದಟ್ಟಣೆ ನಿವಾರಿಸುವ ಹೆಸರಿನಲ್ಲಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಹೆಬ್ಬಾಳ ಶಾರ್ಟ್ ಟನಲ್ (ಸುರಂಗ ರಸ್ತೆ) ಮತ್ತು ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ಯೋಜನೆಗೆ ಮತ್ತೆ ಪ್ರತಿರೋಧ ವ್ಯಕ್ತವಾಗಿದೆ.
ಈ ಬಾರಿ ಈ ಯೋಜನೆಗೆ ದಾಖಲೆ ಸಮೇತ ವಿರೋಧ ವ್ಯಕ್ತಪಡಿಸಿರುವುದು, ಹಿರಿಯ ಪರಿಸರವಾದಿ ಹಾಗೂ ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ. ಪರಿಸರಕ್ಕೆ ಮಾರಕವಾಗುವ ಈ ಯೋಜನೆಗಳನ್ನು
ತಕ್ಷಣವೇ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ 2 ಕೋಟಿಗೂ ಹೆಚ್ಚು ನಾಗರಿಕರ ಪರವಾಗಿ ನವೆಂಬರ್ 19ರಂದು ಈ ಪತ್ರ ಬರೆದಿರುವ ಅವರು, ಹೆಬ್ಬಾಳ ಫ್ಲೈಓವರ್ ದಾಟಲು ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಯು ಬೆಂಗಳೂರಿನ ಭೂಗೋಳ ಮತ್ತು ಭೂವಿಜ್ಞಾನಕ್ಕೆ (Topology and Geology) ಸಂಪೂರ್ಣವಾಗಿ ಅಸಮಂಜಸವಾಗಿದೆ ಎಂದು ಎಚ್ಚರಿಸಿದ್ದಾರೆ.

1,138 ಮರಗಳಿಗೆ ಕುತ್ತು ಮತ್ತು ಪರಿಸರ ಹಾನಿ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ಶಾಲೆಯ ನಿರ್ದೇಶಕಿ ಡಾ. ಹರಿಣಿ ನಾಗೇಂದ್ರ ಮತ್ತು ತಂಡವು ಸಿದ್ಧಪಡಿಸಿರುವ “ಹೆಬ್ಬಾಳ ಶಾರ್ಟ್ ಟನಲ್ ಯೋಜನೆಯ ತ್ವರಿತ ಪರಿಸರ ಪರಿಣಾಮ ಮೌಲ್ಯಮಾಪನ” ವರದಿಯನ್ನು ರಾಹುಲ್ ಗಾಂಧಿ ಅವರಿಗೆ ಕಳುಹಿಸಿರುವ ಯಲ್ಲಪ್ಪ ರೆಡ್ಡಿ ಅವರು, ಕೇವಲ 2.3 ಕಿಲೋಮೀಟರ್ ಉದ್ದದ ರಸ್ತೆಗಾಗಿ ಬರೋಬ್ಬರಿ 1,138 ಮರಗಳನ್ನು ಕಡಿಯುವುದು ಅಥವಾ ಸ್ಥಳಾಂತರಿಸುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದಿದ್ದಾರೆ. ಮರಗಳ ಸ್ಥಳಾಂತರ (Transplantation) ಪ್ರಕ್ರಿಯೆಯು ಅತ್ಯಂತ ಕಡಿಮೆ ಬದುಕುಳಿಯುವಿಕೆಯ ಪ್ರಮಾಣವನ್ನು ಹೊಂದಿದ್ದು, ಅದು ಬಹುತೇಕ ವಿಫಲವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಆತಂಕ: ಈ ಸುರಂಗ ರಸ್ತೆ ಮತ್ತು ಮೇಖ್ರಿ ವೃತ್ತದ ನಡುವೆ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್ ಯೋಜನೆಗಳು ಸಂಚಾರ ದಟ್ಟಣೆಯನ್ನು ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಸ್ಥಳಾಂತರಿಸುತ್ತವೆಯೇ ಹೊರತು ಶಾಶ್ವತ ಪರಿಹಾರ ನೀಡುವುದಿಲ್ಲ. ಬದಲಾಗಿ, ಈ ಎರಡೂ ಯೋಜನೆಗಳ ಸಂಯೋಜನೆಯು ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ತಜ್ಞರ ಅಧ್ಯಯನಗಳು ತಿಳಿಸಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಆಗ್ರಹ: ಸರ್ಕಾರವು ಸುಲಭವಾಗಿ ಜಾರಿಗೊಳಿಸಬಹುದಾದ ಪರ್ಯಾಯ ಮಾರ್ಗಗಳನ್ನು (Low Hanging Fruits) ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಸಾರ್ವಜನಿಕರ ಬೇಡಿಕೆ ಅಥವಾ ಬೆಂಬಲವಿಲ್ಲದ ಯೋಜನೆಗಳನ್ನು ಹೇರುವ ಬದಲು, ಬಸ್, ಮೆಟ್ರೋ ಮತ್ತು ಉಪನಗರ ರೈಲು (Suburban Rail) ಸೇರಿದಂತೆ ಮೂರು ಮಾದರಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ನಗರದ ಕನಿಷ್ಠ ಶೇ. 70ರಷ್ಟು ಪ್ರಯಾಣಗಳು ಸಾರ್ವಜನಿಕ ಸಾರಿಗೆಯಲ್ಲೇ ನಡೆಯುವಂತೆ ಮಾಡಿದರೆ ರಸ್ತೆಗಳು ತಾನಾಗಿಯೇ ಮುಕ್ತವಾಗುತ್ತವೆ ಹಾಗೂ ಜನರು ಸ್ವಂತ ವಾಹನಗಳನ್ನು ಖರೀದಿಸುವ ಅನಿವಾರ್ಯತೆ ತಪ್ಪುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರವನ್ನು (BMLTA) ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪರಿಸರದ ಬಗ್ಗೆ ತಮಗಿರುವ ಬದ್ಧತೆಯಂತೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಸುರಂಗ ರಸ್ತೆ ಮತ್ತು ಫ್ಲೈಓವರ್ ಯೋಜನೆಗಳನ್ನು ರದ್ದುಗೊಳಿಸಿ ಸಾರ್ವಜನಿಕ ಸಾರಿಗೆ ಹಾಗೂ ಪಾದಚಾರಿ ಸ್ನೇಹಿ (Walkability) ಕ್ರಮಗಳಿಗೆ ಆದ್ಯತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕೆಂದು ಡಾ. ಯಲ್ಲಪ್ಪ ರೆಡ್ಡಿ ಮನವಿ ಮಾಡಿದ್ದಾರೆ.

















