ಬೆಂಗಳೂರು, ನ.21 www.bengaluruwire.com: ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿ, ಕೋವಿಡ್ನಂತಹ ಮಹಾಮಾರಿಯ ಕಾಲದಲ್ಲಿ ಪ್ರಾಣದ ಹಂಗು ತೊರೆದು ದುಡಿದ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳು ಈಗ ರಾಜ್ಯ ಸರ್ಕಾರದ ಪಾಲಿಗೆ “ಅತಿ ದೊಡ್ಡದಾಗಿ” (Too large) ಕಾಣುತ್ತಿದೆಯಾ?
ನವೆಂಬರ್ 17 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC ಸಂಯೋಜಿತ) ನಡೆಸುತ್ತಿರುವ ಅಹೋರಾತ್ರಿ ಧರಣಿಯು ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಗಾಂಧಿ ಕುಟುಂಬದ ‘ಆಯ್ದ ಹೋರಾಟ’ಕ್ಕೆ ಆರ್.ಅಶೋಕ್ ಚಾಟಿ:
ಒಂದೆಡೆ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಖಡಕ್ ಆಗಿ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧ ಹರಿಹಾಯ್ದಿದ್ದಾರೆ. “ಜಂತರ್ ಮಂತರ್ನಲ್ಲಿ ಜಿರಳೆಗಳು ಪ್ರತಿಭಟನೆ ನಡೆಸಿದರೂ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ತಕ್ಷಣವೇ ಅಲ್ಲಿಗೆ ಓಡೋಡಿ ಬರುತ್ತಾರೆ. ಆದರೆ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ನ್ಯಾಯಕ್ಕಾಗಿ ಬೀದಿಗಿಳಿದಾಗ ಗಾಂಧಿ ಸಹೋದರ-ಸಹೋದರಿ ಅಡಗಿ ಕುಳಿತಂತಿದೆ!” ಎಂದು ವ್ಯಂಗ್ಯವಾಡಿದ್ದಾರೆ.


“ಕೇವಲ ರಾಜಕೀಯ ಫೋಟೋ-ಆಪ್ಗಳಿಗೆ (Photo-ops) ಅವಕಾಶ ನೀಡುವ ಪ್ರತಿಭಟನೆಗಳಿಗೆ ಮಾತ್ರ ಇವರ ಬೆಂಬಲ ಮೀಸಲಾಗಿದೆಯೇ? ಆಶಾ ಕಾರ್ಯಕರ್ತೆಯರಿಗೆ ಅದೇ ಗಮನ, ಸಹಾನುಭೂತಿ ಮತ್ತು ಆಕ್ರೋಶ ಸಿಗಬಾರದೇ? ಜಂತರ್ ಮಂತರ್ನ ಪ್ರತಿಯೊಂದು ಪ್ರತಿಭಟನೆಗೂ ಗಾಂಧಿಗಳಿಗೆ ಬೇಕಾದಷ್ಟು ಸಮಯವಿದೆ, ಆದರೆ ಕರ್ನಾಟಕದ ಜನತೆಗಾಗಿ ಒಂದೇ ಒಂದು ಕ್ಷಣವೂ ಇಲ್ಲ! ಇದು ಆಯ್ದ ಒಗ್ಗಟ್ಟು, ಅನುಕೂಲಕರ ಮೌನ ಮತ್ತು ಕಾಂಗ್ರೆಸ್ನ ಕ್ಲಾಸಿಕ್ ಬೂಟಾಟಿಕೆ” ಎಂದು ಅಶೋಕ್ ನೇರ ವಾಗ್ದಾಳಿ ನಡೆಸಿದ್ದಾರೆ.
ಶ್ರಮಿಕರ ನಡುವೆ ಒಡಕು ಮೂಡಿಸುವ ಷಡ್ಯಂತ್ರವೇ?: ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದರೆ ಅಂಗನವಾಡಿ, ಬಿಸಿಯೂಟ ನೌಕರರು ಹಾಗೂ ಅತಿಥಿ ಶಿಕ್ಷಕರೂ ಇದೇ ಬೇಡಿಕೆ ಇಡುತ್ತಾರೆ ಎಂಬ ರಾಜ್ಯ ಸರ್ಕಾರದ ವಾದ ಅತ್ಯಂತ ಅಪಾಯಕಾರಿ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮತ್ತು ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಕಿಡಿಕಾರಿದ್ದಾರೆ. ಒಂದು ವರ್ಗದ ಕಾರ್ಮಿಕರ ಸಂಕಷ್ಟವನ್ನು ಮುಂದಿಟ್ಟು ಮತ್ತೊಂದು ವರ್ಗದ ಹಕ್ಕನ್ನು ಕಸಿದುಕೊಳ್ಳುವುದು ಶ್ರಮಿಕ ವರ್ಗವನ್ನು ಪರಸ್ಪರ ಎತ್ತಿಕಟ್ಟುವ ಷಡ್ಯಂತ್ರವಲ್ಲದೆ ಬೇರೇನಲ್ಲ.
“ಒಂದೇ ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂಬ ಮುಖ್ಯಮಂತ್ರಿಗಳ ಹೇಳಿಕೆ ಹಸಿಸುಳ್ಳು ಎಂದು ಸಂಘವು ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ಹಲವು ವರ್ಷಗಳಿಂದ ₹15,000 ಗೌರವಧನಕ್ಕಾಗಿ ಹೋರಾಟ ನಡೆಯುತ್ತಿದ್ದು, 2025ರ ಜನವರಿಯಲ್ಲೂ ಸರ್ಕಾರ ಸುಳ್ಳು ಭರವಸೆ ನೀಡಿ ವಂಚಿಸಿತ್ತು. ಸಿದ್ದರಾಮಯ್ಯನವರು ಈ ಹಿಂದೆ ನೀಡಿದ್ದ ₹10,000 ಗ್ಯಾರಂಟಿ ಭರವಸೆ ಇಂದಿಗೂ ಈಡೇರಿಲ್ಲ; ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರ ಹೆಚ್ಚಿಸಿರುವುದು ಕೇವಲ ₹1,500 ಮಾತ್ರ. ದೇಶದಲ್ಲೇ ಅತಿ ಹೆಚ್ಚು ಜಿಎಸ್ಟಿ (GST) ಸಂಗ್ರಹಿಸುವ ಎರಡನೇ ರಾಜ್ಯವಾಗಿರುವ ಕರ್ನಾಟಕಕ್ಕೆ, ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಂತೆ ₹12,000 ನಿಶ್ಚಿತ ಗೌರವಧನ ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.
ಆರ್ಥಿಕ ಕೊರತೆಯ ನೆಪ ಮತ್ತು ಸರ್ಕಾರದ ದುಂದುವೆಚ್ಚದ ಅಂಕಿಅಂಶ:
ಹಣಕಾಸಿನ ಮುಗ್ಗಟ್ಟಿನ ನೆಪ ಹೇಳುವ ಸರ್ಕಾರದ ಬೊಕ್ಕಸ ಖಾಲಿಯಾಗಿರುವುದು ಬಡ ನೌಕರರಿಗೆ ವೇತನ ನೀಡಲು ಮಾತ್ರವೇ ಎಂಬ ಪ್ರಶ್ನೆ ಎದ್ದಿದೆ.
ಕಾರ್ಪೊರೇಟ್ ಕಂಪನಿಗಳಿಗೆ ₹11,000 ಕೋಟಿ: ಕಳೆದ ಮೂರು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಕಾರ್ಪೊರೇಟ್ ಕಂಪನಿಗಳಿಗೆ ಪ್ರೋತ್ಸಾಹಧನದ ಹೆಸರಿನಲ್ಲಿ ಸಾರ್ವಜನಿಕ ಬೊಕ್ಕಸದಿಂದ ₹11,000 ಕೋಟಿ ನೀಡಲಾಗಿದೆ. ಇದರಲ್ಲಿ ಕೇವಲ ಶೇ. 5 ರಷ್ಟು ಕಡಿತಗೊಳಿಸಿದರೂ ರಾಜ್ಯದ 41,000 ಆಶಾ ಕಾರ್ಯಕರ್ತೆಯರ ಗೌರವಯುತ ಬದುಕಿಗೆ ಬೇಕಾದ ₹492 ಕೋಟಿ ಸುಲಭವಾಗಿ ಹೊಂದಿಸಬಹುದು.
ಜಾಹೀರಾತು ಮತ್ತು ಐಷಾರಾಮಿ ವೆಚ್ಚ: ಕಳೆದ ಮೂರು ವರ್ಷಗಳಲ್ಲಿ ಜಾಹೀರಾತಿಗಾಗಿ ₹500 ಕೋಟಿ ವ್ಯಯಿಸಲಾಗಿದೆ. ಅಲ್ಲದೆ, ಯಾವುದೇ ಅನಿವಾರ್ಯತೆ ಇಲ್ಲದಿದ್ದರೂ ಎಲ್ಲಾ ಪಕ್ಷಗಳ ಸಂಸದರಿಗೆ ತಲಾ ₹30 ಲಕ್ಷ ಮೌಲ್ಯದ ಕಾರುಗಳನ್ನು ನೀಡಲಾಗಿದೆ.
ಮೆಗಾ ಯೋಜನೆಗಳಿಗೆ ಸಾವಿರಾರು ಕೋಟಿ: ಸುರಂಗ ರಸ್ತೆ (Tunnel Road) ಯೋಜನೆಗಳಿಗೆ ಸಾವಿರಾರು ಕೋಟಿ ಸುರಿಯಲು ಮುಂದಾಗಿರುವ ಸರ್ಕಾರ, ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಬರೋಬ್ಬರಿ ₹20,000 ಕೋಟಿ ಮಂಜೂರು ಮಾಡಿದೆ.
ಕೇಂದ್ರದ ನಿರ್ಲಕ್ಷ್ಯ ಮತ್ತು ರಾಜಕೀಯ ಪಕ್ಷಗಳಿಗೆ ಖಡಕ್ ಸಂದೇಶ:
ಕೇವಲ ರಾಜ್ಯ ಸರ್ಕಾರವಷ್ಟೇ ಅಲ್ಲ, ಕೇಂದ್ರದ ಬಿಜೆಪಿ ಸರ್ಕಾರವೂ ಈ ವಿಚಾರದಲ್ಲಿ ನುಣುಚಿಕೊಳ್ಳುತ್ತಿದೆ ಎಂದು ಸಂಘಟನೆ ಬೊಟ್ಟು ಮಾಡಿದೆ. ಆಶಾ ಕಾರ್ಯಕರ್ತೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿ ನಾಯಕರು, ಒಂದೂವರೆ ವರ್ಷದ ಹಿಂದೆ ಕೇಂದ್ರ ಸರ್ಕಾರ ಘೋಷಿಸಿದ್ದ ₹1,500 ಪ್ರೋತ್ಸಾಹಧನ ಹೆಚ್ಚಳ ಇನ್ನೂ ಏಕೆ ಜಾರಿಯಾಗಿಲ್ಲ ಎಂಬುದಕ್ಕೆ ಉತ್ತರಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನವನ್ನು ಒಂದು ರೂಪಾಯಿಯಷ್ಟೂ ಹೆಚ್ಚಿಸಿಲ್ಲ.
ವಿಶೇಷವೆಂದರೆ, ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಸಾಹಿತಿಗಳು, ಬುದ್ಧಿಜೀವಿಗಳು, ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಆಹಾರ, ನೀರು ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ. ಆದರೆ, ಈ ಹೋರಾಟ ಸಂಪೂರ್ಣ ಸ್ವತಂತ್ರ ಕಾರ್ಮಿಕ ಚಳವಳಿಯಾಗಿದ್ದು, ಯಾವುದೇ ರಾಜಕೀಯ ಪಕ್ಷಗಳ ಆರ್ಥಿಕ ಅಥವಾ ವಸ್ತು ರೂಪದ ಸಹಾಯವನ್ನು ಸಂಘವು ಸಾರಾಸಗಟಾಗಿ ತಿರಸ್ಕರಿಸಿದೆ. ರಾಜಕೀಯ ಪಕ್ಷಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಸಹಾಯ ಮಾಡುವ ಬದಲು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ರಾಜಕೀಯ ಒತ್ತಡ ಹೇರಿ ತಕ್ಷಣವೇ ಬೇಡಿಕೆ ಈಡೇರಿಸಲಿ ಎಂದು ಆಶಾ ಕಾರ್ಯಕರ್ತೆಯರ ಸಂಘ ಖಡಕ್ ಎಚ್ಚರಿಕೆ ನೀಡಿದೆ.

















