ಬೆಂಗಳೂರು, ಜು.07 www.bengaluruwire.com : ಅನ್ನಭಾಗ್ಯ ಸೇರಿದಂತೆ ರಾಜ್ಯದ ವಿವಿಧ ಯೋಜನೆಗಳಿಗೆ ಪಡಿತರ ಆಹಾರಧಾನ್ಯಗಳನ್ನು ಸಾಗಣೆ ಮಾಡುವ ಲಾರಿ ಮಾಲೀಕರಿಗೆ ಕಳೆದ ಐದು ತಿಂಗಳಿಂದ ₹260 ಕೋಟಿ ಬಾಕಿ ಹಣ ಪಾವತಿಸದ ಕಾರಣ, ಇಂದು (ಜುಲೈ 7) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋಡೌನ್‌ಗಳಿಂದ ಆಹಾರ ಧಾನ್ಯ ಸಾಗಣೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದರಿಂದ ರಾಜ್ಯಾದ್ಯಂತ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಫೆಬ್ರವರಿಯಿಂದ ಜೂನ್‌ವರೆಗಿನ ಸಾಗಣೆ ಬಾಕಿ ಹಣ ₹260 ಕೋಟಿ ಬಿಡುಗಡೆ ಮಾಡದಿರುವುದು ಲಾರಿ ಮಾಲೀಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಇಂಧನ ವೆಚ್ಚ, ಸಾರಿಗೆ ತೆರಿಗೆ, ಸಿಬ್ಬಂದಿ ವೇತನ ಪಾವತಿಸಲಾಗದೆ ಮಾಲೀಕರು ಹೈರಾಣಾಗಿದ್ದಾರೆ.
ಸರ್ಕಾರದ ಭರವಸೆ ಹುಸಿ:

ಕಳೆದ ತಿಂಗಳ ಜೂನ್ 19ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳು ಲಾರಿ ಮಾಲೀಕರೊಂದಿಗೆ ಸಭೆ ನಡೆಸಿ, ಜೂನ್ 25ರೊಳಗೆ ಬಾಕಿ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಹಣ ಬಿಡುಗಡೆಯಾಗದ ಕಾರಣ, ಇಂದಿನಿಂದ ಬೆಳಗ್ಗೆ 9 ಗಂಟೆಯಿಂದಲೇ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಹೀಗಾಗಿ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟಿಗಟ್ಟಲೆ ಬಾಕಿ, ಮಾಲೀಕರ ಗೋಳು:
ರಾಜ್ಯ ಸರ್ಕಾರ ಲಾರಿ ಮಾಲೀಕರಿಗೆ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಬಾಕಿ ಸೇರಿದಂತೆ ಸುಮಾರು ₹260 ಕೋಟಿ ಹಣ ಪಾವತಿಸಬೇಕಿದೆ. ಇಡೀ ರಾಜ್ಯಕ್ಕೆ ಪ್ರತಿ ತಿಂಗಳು 4.50 ಲಕ್ಷ ಟನ್ ಆಹಾರ ಧಾನ್ಯಗಳನ್ನು ಲಾರಿಗಳ ಮೂಲಕ ಸಾಗಣೆ ಮಾಡಲಾಗುತ್ತದೆ. ಕಳೆದ ಆರು ತಿಂಗಳಲ್ಲಿ ಸುಮಾರು 25 ಲಕ್ಷ ಟನ್ ಆಹಾರ ಧಾನ್ಯಗಳನ್ನು ಸಾಗಿಸಿದ್ದರೂ, ಅದಕ್ಕೆ ಬರಬೇಕಾದ ₹260 ಕೋಟಿ ಹಣವನ್ನು ಆಹಾರ ಇಲಾಖೆ ಬಿಡುಗಡೆ ಮಾಡಿಲ್ಲ. “ನಮ್ಮೆಲ್ಲರಿಗೆ ಈ ಹಣ ನೀಡುವ ತನಕ ನಮ್ಮ ಪ್ರತಿಭಟನೆ ಕೈಬಿಡಲ್ಲ” ಎಂದು ಷಣ್ಮುಗಪ್ಪ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜೀವನೋಪಾಯಕ್ಕೆ ಕುತ್ತು:
ಸುಮಾರು 4,500 ಲಾರಿಗಳು ಆಹಾರ ಧಾನ್ಯ ಸಾಗಣೆಯಲ್ಲಿ ತೊಡಗಿವೆ. ಇವುಗಳಲ್ಲಿ 1,000 ಲಾರಿಗಳು ಗುತ್ತಿಗೆ ಆಧಾರಿತವಾಗಿದ್ದರೆ, 3,500 ಲಾರಿಗಳು ಸ್ವಂತ ಮಾಲೀಕತ್ವದವಾಗಿವೆ. “ನಮ್ಮ ಲಾರಿ ಮಾಲೀಕರು ಮನೆ-ಮಠ ಅಡವಿಟ್ಟು ದಿಕ್ಕು ತೋಚದಂತಾಗಿದ್ದಾರೆ. ಡೀಸೆಲ್, ವಾಹನ ಚಾಲಕರು, ಕ್ಲೀನರ್‌ಗಳಿಗೆ ದುಡ್ಡು ಕೊಡಲು ಆಗುತ್ತಿಲ್ಲ. ಹಾಗಾಗಿ ಈ ಪ್ರತಿಭಟನೆಯ ನಿರ್ಧಾರಕ್ಕೆ ಬರಲಾಗಿದೆ” ಎಂದು ಷಣ್ಮುಗಪ್ಪ ಅಳಲು ತೋಡಿಕೊಂಡಿದ್ದಾರೆ.
ಸುಮಾರು 9 ತಿಂಗಳ ಹಿಂದೆ ಆಹಾರ ಧಾನ್ಯ ಪೂರೈಕೆಗೆ ಟೆಂಡರ್ ಕರೆಯಲಾಗಿದ್ದು, ಆಗ ಪ್ರತಿಯೊಬ್ಬ ಲಾರಿ ಮಾಲೀಕರು 4 ಲಕ್ಷ ರೂಪಾಯಿ ಠೇವಣಿ ಹಣ ಕಟ್ಟಬೇಕಾಗಿತ್ತು. ಆ ಹಣ ಕಟ್ಟಿ, ಟೆಂಡರ್ ಪಡೆದು, ಆಹಾರ ಧಾನ್ಯ ಸಾಗಣೆ ಮಾಡಿದ ನಂತರವೂ ಸರ್ಕಾರ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಮಾಲೀಕರು ಆಕ್ಷೇಪಿಸಿದ್ದಾರೆ. ಕಾರ್ಮಿಕರ ಇಎಸ್‌ಐ, ಪಿಎಫ್ ಹಣವನ್ನು ತಾವು ಕಟ್ಟಬೇಕಿದ್ದು, ಆ ಹಣವನ್ನೂ ಸರ್ಕಾರ ಪಾವತಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೂಡಲೇ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿರುವ ಲಾರಿ ಮಾಲೀಕರು, ಬೇಡಿಕೆ ಈಡೇರುವವರೆಗೂ ಆಹಾರ ಧಾನ್ಯ ವಿತರಣೆಯನ್ನು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.























