ನವದೆಹಲಿ, ಜೂ.23 www.bengaluruwire.com: ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ನಾಯಕರ ಗಮನಕ್ಕೆ ಸಂಪೂರ್ಣ ಮಾಹಿತಿಯನ್ನು ತರಲಾಗಿದ್ದು, ಶೀಘ್ರದಲ್ಲೇ ಶಿಸ್ತುಕ್ರಮ ಜರುಗುವ ಸಾಧ್ಯತೆ ಇದೆ.
ನವದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಚುನಾವಣೆಯಲ್ಲಿ ಕೆಲವು ಶಾಸಕರು ಅಡ್ಡ ಮತದಾನ ಮಾಡಿರುವ ಬಗ್ಗೆ ರಾಷ್ಟ್ರೀಯ ಮುಖಂಡ ನಿತಿನ್ ನವೀನ್ ಅವರ ಗಮನಕ್ಕೆ ತರಲಾಗಿದೆ. ವರಿಷ್ಠರ ಮಟ್ಟದಲ್ಲೂ ಈ ಬಗ್ಗೆ ನಿಖರ ಮಾಹಿತಿಯಿದೆ. ಈ ಬೆಳವಣಿಗೆಯನ್ನು ಪಕ್ಷವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಸಂಘಟನಾತ್ಮಕವಾಗಿ ಕೆಲಸ ಮಾಡುವಂತೆ ರಾಷ್ಟ್ರೀಯ ನಾಯಕರು ಸಲಹೆ ನೀಡಿದ್ದಾರೆ ಎಂದು ವಿಜಯೇಂದ್ರ ಇದೇ ವೇಳೆ ವಿವರಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಅಡ್ಡ ಮತದಾನ ಮಾಡಿದವರ ಸಂಪೂರ್ಣ ವಿವರ ಮತ್ತು ಅಂಕಿಅಂಶಗಳು ರಾಷ್ಟ್ರೀಯ ನಾಯಕರ ಬಳಿ ಇದೆ. ರಾಜ್ಯ ಘಟಕ ನೀಡಿದ ಮಾಹಿತಿಯ ಆಧಾರದ ಮೇಲೆ, ತಪ್ಪು ಮಾಡಿದವರ ವಿರುದ್ಧ ಸೂಕ್ತ ಸಮಯದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸುವುದಾಗಿ ವರಿಷ್ಠರು ಸ್ಪಷ್ಟವಾಗಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮುಂದಿನ ಚುನಾವಣೆಯ ದೃಷ್ಟಿಯಿಂದ ಪಕ್ಷವನ್ನು ಒಗ್ಗೂಡಿಸಿ, ಒಳ್ಳೆಯ ರೀತಿಯಿಂದ ಮುನ್ನಡೆಯುವಂತೆ ಕೇಂದ್ರ ನಾಯಕರು ತಿಳಿಸಿದ್ದಾರೆ. ಹೀಗಾಗಿ ಶಿಸ್ತು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಗ್ಯಾರಂಟಿ ಎಂಬ ಸಂದೇಶವನ್ನು ನಾಯಕರು ರವಾನಿಸಿದ್ದಾರೆ ಎಂದು ಅವರು ಹೇಳಿದರು.



















