ಬೆಂಗಳೂರು, ಜು.13 www.bengaluruwire.com: ಐಟಿ ಸಿಟಿ ಬೆಂಗಳೂರಿನ ಜನರನ್ನು ಹೈರಾಣಾಗಿಸುತ್ತಿರುವ ಸಂಚಾರ ದಟ್ಟಣೆಗೆ (Traffic Congestion) ಮುಕ್ತಿ ಹಾಡಲು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (NIPDA) ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ.
ನಗರದ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುವ ನೂರಾರು ಭಾರೀ ತೈಲ ಟ್ಯಾಂಕರ್‌ಗಳನ್ನು ಪೆರಿಫೆರಲ್ ಕಾರಿಡಾರ್‌ಗಳ ಮೂಲಕ ಡೈವರ್ಟ್ ಮಾಡುವುದರಿಂದ ಸಿಟಿಯ ಟ್ರಾಫಿಕ್ ಕಿರಿಕಿರಿಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು ಎಂದು ಸಂಘವು ತಿಳಿಸಿದೆ.
ಈ ಕುರಿತು “ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್” (Greater Bengaluru District & Neighbouring Districts) ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಕಮಿಷನರ್ ಅವರಿಗೆ ಅಧಿಕೃತ ಮನವಿಯೊಂದನ್ನು ಸಲ್ಲಿಸಿದೆ.
ದೇವನಗೊಂದಿ ಐಓಸಿಎಲ್ (IOCL) ಟರ್ಮಿನಲ್ ಸೇರಿದಂತೆ ವಿವಿಧ ತೈಲ ಕಂಪನಿಗಳ ಘಟಕಗಳಿಂದ ಹೊರಡುವ ಪೆಟ್ರೋಲ್, ಡೀಸೆಲ್ ಹಾಗೂ ಎಥನಾಲ್ ಹೊತ್ತ ಟ್ಯಾಂಕರ್‌ಗಳನ್ನು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR), ನೈಸ್ (NICE) ರಸ್ತೆ ಹಾಗೂ ಇತರ ಬೈಪಾಸ್ ರಸ್ತೆಗಳ ಮೂಲಕ ಮರುಮಾರ್ಗಗೊಳಿಸುವಂತೆ ಸಂಘವು ಒತ್ತಾಯಿಸಿದೆ.

ಸಿಟಿ ಟ್ರಾಫಿಕ್‌ಗೆ ತಲೆನೋವಾದ ಹೊರ ಜಿಲ್ಲೆಯ ಟ್ಯಾಂಕರ್‌ಗಳು:
ಪ್ರಸ್ತುತ ದೇವನಗೊಂಡಿ ಟರ್ಮಿನಲ್‌ನಿಂದ ಲೋಡ್ ಮಾಡಿಕೊಳ್ಳುವ ನೂರಾರು ಟ್ಯಾಂಕರ್‌ಗಳು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ ಹಾಗೂ ಚಿತ್ರದುರ್ಗ ಸೇರಿದಂತೆ ವಿವಿಧ ಹೊರ ಜಿಲ್ಲೆಗಳಿಗೆ ತಲುಪಬೇಕಿದೆ. ಆದರೆ, ಈ ವಾಹನಗಳು ಬೆಂಗಳೂರು ನಗರದ ಹೃದಯಭಾಗದ ಮೂಲಕವೇ ಹಾದು ಹೋಗುತ್ತಿರುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ದುಸ್ತರವಾಗುತ್ತಿದೆ.
ವಿಶೇಷವಾಗಿ ಕೆ.ಆರ್. ಪುರಂ, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಯಶವಂತಪುರ, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ ಪೀಕ್ ಅವರ್‌ಗಳಲ್ಲಿ ಈ ಭಾರೀ ವಾಹನಗಳು ಸಂಚರಿಸುವುದರಿಂದ ಇಡೀ ಟ್ರಾಫಿಕ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ. ಒಂದು ಭಾರೀ ಟ್ಯಾಂಕರ್ ರಸ್ತೆಯಲ್ಲಿ ಸುಮಾರು 3 ಕಾರುಗಳಷ್ಟು ಜಾಗವನ್ನು ಆಕ್ರಮಿಸಿಕೊಳ್ಳುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ತೀವ್ರಗೊಳ್ಳುತ್ತಿದೆ.
ಎಸ್‌ಟಿಆರ್‌ಆರ್ (STRR) ಬಳಕೆಯಿಂದ ಸಿಗುವ ಲಾಭಗಳು:
NIPDA ನೀಡಿರುವ ಅಂಕಿ-ಅಂಶಗಳ ಪ್ರಕಾರ, ಪ್ರತಿದಿನ ಸುಮಾರು 400 ರಿಂದ 600 ತೈಲ ಟ್ಯಾಂಕರ್‌ಗಳು ಬೆಂಗಳೂರು ನಗರದ ಒಳಗೆ ಪ್ರವೇಶಿಸುತ್ತವೆ ಅಥವಾ ನಗರದ ಮೂಲಕ ಹಾದುಹೋಗುತ್ತವೆ. ಇವುಗಳನ್ನು ನಗರದ ಹೊರವಲಯದ ರಸ್ತೆಗಳಿಗೆ ಡೈವರ್ಟ್ ಮಾಡುವುದರಿಂದ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು:
ಶೇ. 10 ರಷ್ಟು ಟ್ರಾಫಿಕ್ ಕಡಿತ: ಪ್ರಮುಖ ಕಾರಿಡಾರ್‌ಗಳಲ್ಲಿ ಭಾರೀ ವಾಹನಗಳ ಸಂಚಾರ ಶೇ. 8 ರಿಂದ 12 ರಷ್ಟು ಕಡಿಮೆಯಾಗಲಿದ್ದು, ಪೀಕ್ ಅವರ್‌ಗಳಲ್ಲಿ ಒಟ್ಟಾರೆ ನಗರದ ಟ್ರಾಫಿಕ್ ದಟ್ಟಣೆ ಶೇ. 10 ರಷ್ಟು ಇಳಿಕೆಯಾಗಲಿದೆ.
ಕೋಟಿ ಮೌಲ್ಯದ ಇಂಧನ ಉಳಿತಾಯ: ಟ್ರಾಫಿಕ್‌ನಲ್ಲಿ ಸಿಲುಕುವ ಟ್ಯಾಂಕರ್‌ಗಳ ಐಡ್ಲಿಂಗ್ ಸಮಯ 30 ರಿಂದ 60 ನಿಮಿಷ ಕಡಿಮೆಯಾಗಲಿದೆ. ಇದರಿಂದ ದಿನಕ್ಕೆ 2,500 ರಿಂದ 5,000 ಲೀಟರ್ ಡೀಸೆಲ್ ಉಳಿತಾಯವಾಗಲಿದ್ದು, ವಾರ್ಷಿಕವಾಗಿ ಸುಮಾರು 9 ರಿಂದ 18 ಲಕ್ಷ ಲೀಟರ್ ಇಂಧನ ರಾಷ್ಟ್ರಕ್ಕೆ ಉಳಿಯಲಿದೆ.
ಮಾಲಿನ್ಯ ಮುಕ್ತ ಬೆಂಗಳೂರು: ಈ ಯೋಜನೆಯಿಂದಾಗಿ ವಾರ್ಷಿಕವಾಗಿ ಸುಮಾರು 2,500 ರಿಂದ 5,000 ಟನ್ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಲಿದ್ದು, ನಗರದ ವಾಯು ಗುಣಮಟ್ಟ ಸುಧಾರಿಸಲಿದೆ.
ಸಾರ್ವಜನಿಕ ಸುರಕ್ಷತೆ: ಜನನಿಬಿಡ ಪ್ರದೇಶಗಳಲ್ಲಿ ಅತ್ಯಂತ ಜ್ವಲನಕಾರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊತ್ತ ವಾಹನಗಳು ಸಂಚರಿಸುವುದು ತಪ್ಪುವುದರಿಂದ ದೊಡ್ಡ ಮಟ್ಟದ ಅಪಘಾತದ ಅಪಾಯಗಳು ಇಲ್ಲವಾಗುತ್ತವೆ.
ಜಂಟಿ ಕಾರ್ಯಪಡೆ ರಚನೆಗೆ ಎನ್ಐಪಿಡಿಎ ಆಗ್ರಹ:
ಈ ಬೃಹತ್ ಬದಲಾವಣೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಬೆಂಗಳೂರು ಸಂಚಾರ ಪೊಲೀಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಪ್ರಮುಖ ತೈಲ ಕಂಪನಿಗಳಾದ IOCL, BPCL, HPCL ಮತ್ತು ಸಾರಿಗೆ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ “ಜಂಟಿ ಕಾರ್ಯಪಡೆ” (Joint Task Force) ಒಂದನ್ನು ರಚಿಸಬೇಕು ಎಂದು ಅಸೋಸಿಯೇಷನ್ ವಿನಂತಿಸಿದೆ.
ನಗರದ ಒಳಗಿರುವ ಪೆಟ್ರೋಲ್ ಬಂಕ್‌ಗಳಿಗೆ ಬರುವ ಟ್ಯಾಂಕರ್‌ಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಹೊರ ಜಿಲ್ಲೆಯ ಟ್ಯಾಂಕರ್‌ಗಳಿಗೆ ಜಿಪಿಎಸ್ ಆಧಾರಿತ ರೂಟ್ ಮಾನಿಟರಿಂಗ್ ಅಳವಡಿಸಿ, ಕಡ್ಡಾಯವಾಗಿ STRR ಮತ್ತು ನೈಸ್ ರಸ್ತೆ ಬಳಸುವಂತೆ ನಿಯಮ ರೂಪಿಸಬೇಕೆಂದು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪೊಲೀಸ್ ಕಮಿಷನರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದೆ.






















