ಬೆಂಗಳೂರು, ಜು.10 www.bengaluruwire.com: ಎಲ್ ನಿನೋ (El Nino) ಪ್ರಭಾವದಿಂದ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆಯು ರಾಜ್ಯದ ಜಲ ವಿದ್ಯುತ್ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರಲಿದೆ.
ಈ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಸ್ಕಾಂ ಕೇಂದ್ರ ಕಚೇರಿ ಬೆಳಕು ಭವನದಲ್ಲಿ ರಾಜ್ಯದ ಪ್ರಸ್ತುತ ವಿದ್ಯುತ್ ಸ್ಥಿತಿಗತಿಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಸಮರ್ಪಕ ವಿದ್ಯುತ್ ಪೂರೈಕೆಗೆ ಪರ್ಯಾಯ ಮಾರ್ಗಗಳನ್ನು ತ್ವರಿತವಾಗಿ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪರ್ಯಾಯ ವಿದ್ಯುತ್ ಉತ್ಪಾದನೆಗೆ ಒತ್ತು:

ಈ ಬಾರಿ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದ್ದರಿಂದ ಶಾಖೋತ್ಪನ್ನ (ಉಷ್ಣ) ವಿದ್ಯುತ್ ಸ್ಥಾವರಗಳ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕು. ಇದರೊಂದಿಗೆ ಸೌರ ಮತ್ತು ಪವನ ವಿದ್ಯುತ್ ಘಟಕಗಳ ಗರಿಷ್ಠ ಬಳಕೆ ಹಾಗೂ ಕೋ-ಜನರೇಷನ್ ಘಟಕಗಳಿಂದ ವಿದ್ಯುತ್ ಪಡೆಯಲು ತ್ವರಿತ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಮತ್ತೊಂದೆಡೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗುತ್ತಿದ್ದು, ಇದನ್ನು ಸಮರೋಪಾದಿಯಲ್ಲಿ ಸರಿಪಡಿಸಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರವಹಿಸಲು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ರೂಪಿಸಿದ ಪ್ರಮುಖ ಕ್ರಿಯಾ ಯೋಜನೆಗಳು:
ಕೆಪಿಸಿಎಲ್ ವತಿಯಿಂದ ಉಷ್ಣ ವಿದ್ಯುತ್ ಸ್ಥಾವರಗಳ ಗರಿಷ್ಠ ನಿರ್ವಹಣೆ ಹಾಗೂ ಅಗತ್ಯ ಕಲ್ಲಿದ್ದಲು ದಾಸ್ತಾನು ಲಭ್ಯತೆ ಖಚಿತಪಡಿಸಿಕೊಳ್ಳುವುದು.
500 ಮೆ.ವ್ಯಾ. ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್ ಹಾಗೂ ಕ್ರೆಡಲ್ ಮೂಲಕ ಜೆಎಸ್‌ಡಬ್ಲ್ಯೂನ 300 ಮೆ.ವ್ಯಾ. ಸೌರ ವಿದ್ಯುತ್ ಯೋಜನೆಗಳ ತ್ವರಿತ ಕಾರ್ಯಾರಂಭ.
ಎಸ್ಕಾಂಗಳು ಮತ್ತು ಕ್ರೆಡಲ್ ವತಿಯಿಂದ ಕುಸುಮ್-ಬಿ ಮತ್ತು ಕುಸುಮ್-ಸಿ ಯೋಜನೆಗಳ ಕಾಮಗಾರಿಗಳ ಶೀಘ್ರ ಅನುಷ್ಠಾನ.
ಸಹ-ಉತ್ಪಾದನಾ ಘಟಕಗಳಿಂದ 500 ರಿಂದ 700 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಪಿಸಿಕೆಎಲ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವುದು.
ಅಕ್ಟೋಬರ್‌ಗೂ ಮುನ್ನ ಇತರೆ ರಾಜ್ಯಗಳೊಂದಿಗೆ ರೌಂಡ್ ದ ಕ್ಲಾಕ್ (RTC) ಹಾಗೂ ಪೀಕ್ ಅವರ್ ವಿದ್ಯುತ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸುವುದು.
ಆರ್ಥಿಕ ಹೊರೆಯಾಗದಂತೆ ಎಚ್ಚರ: ಸಚಿವ ಕೆ.ಜೆ. ಜಾರ್ಜ್
ಮುಂದಿನ ವರ್ಷದ ಮೇ ಅಂತ್ಯದವರೆಗೆ ಸಮರ್ಪಕ ವಿದ್ಯುತ್ ಪೂರೈಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. “ಪ್ರಕೃತಿ ವಿಕೋಪದ ನಡುವೆಯೂ ವಿದ್ಯುತ್ ಪೂರೈಕೆಗೆ ತೊಂದರೆಯಾಗಬಾರದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ. ಜನರಿಗೆ ತೊಂದರೆಯಾಗದಂತೆ ಹಾಗೂ ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕು” ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸಭೆಯಲ್ಲಿ ಕೆಪಿಟಿಸಿಎಲ್ ಎಂಡಿ ಡಾ.ವಿ. ರಾಮ ಪ್ರಸಾತ್ ಮನೋಹರ್, ಬೆಸ್ಕಾಂ ಎಂಡಿ ಡಾ. ಎನ್. ಶಿವಶಂಕರ, ಪಿಸಿಕೆಎಲ್ ಎಂಡಿ ಪಿ.ಕೆ. ವೆಂಕಟೇಶ್, ಕೆಆರ್‌ಇಡಿಎಲ್ ಎಂಡಿ ಕೆ.ಪಿ. ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಲ್ಲಾ ಎಸ್ಕಾಂಗಳ ಎಂಡಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.




















