ನೆಲಮಂಗಲ, ಜು.09 www.bengaluruwire.com: ತೈಲ ಸಾಗಿಸುತ್ತಿದ್ದ ಇಂಡಿಯನ್ ಆಯಿಲ್ (IOCL) ಟ್ಯಾಂಕರ್ ಮತ್ತು ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ತಪ್ಪಿಸಲು ಹೋಗಿ ತೈಲ ಟ್ಯಾಂಕರ್ ಮರಕ್ಕೆ ಅಪ್ಪಳಿಸಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಭೀಕರ ಘಟನೆ ನೆಲಮಂಗಲ ವ್ಯಾಪ್ತಿಯಲ್ಲಿ ನಡೆದಿದೆ.
ಚಾಲಕರ ಸಮಯಪ್ರಜ್ಞೆಯಿಂದ ಭಾರೀ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇದು ಎನ್ ಐಪಿಡಿಎ ಸದಸ್ಯ ಹಾಗೂ ಐಒಸಿಎಲ್ ಡೀಲರ್ ಆಗಿರುವ ಅನಿಲ್ ಕುಮಾರ್ ಅವರಿಗೆ ಸೇರಿದ ಟ್ಯಾಂಕರ್ ಆಗಿದ್ದು, ತಮ್ಮ ರಿಟೇಲ್ ಔಟ್‌ಲೆಟ್‌ಗೆ ಇಂಧನ ಸಾಗಿಸುವಾಗ ಈ ದುರ್ಘಟನೆ ಸಂಭವಿಸಿದೆ.
ಕ್ಷಣಾರ್ಧದಲ್ಲಿ ನಡೆದ ದುರಂತ:
ಮಾರ್ಗಮಧ್ಯೆ ಹಾಲಿನ ಟ್ಯಾಂಕರ್ ಏಕಾಏಕಿ ಐಒಸಿಎಲ್ ಟ್ಯಾಂಕರ್‌ನ ಎದುರಿಗೆ ಬಂದಿದೆ. ಈ ವೇಳೆ ನೇರ ಡಿಕ್ಕಿಯನ್ನು ತಪ್ಪಿಸಲು ತೈಲ ಟ್ಯಾಂಕರ್ ಸಿಬ್ಬಂದಿ ವಾಹನವನ್ನು ರಸ್ತೆ ಬದಿಯಲ್ಲಿದ್ದ ಬೃಹತ್ ಮರಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಮರಕ್ಕೆ ಅಪ್ಪಳಿಸಿದ ರಭಸಕ್ಕೆ ಟ್ಯಾಂಕರ್‌ನಲ್ಲಿ ಭಾರೀ ಅಗ್ನಿಗೋಳ ಸೃಷ್ಟಿಯಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಇದರ ಸಮೀಪದಲ್ಲಿದ್ದ ಹಾಲಿನ ಟ್ಯಾಂಕರ್‌ನ ಕ್ಯಾಬಿನ್ ಹಾಗೂ ಮುಂಭಾಗದ ಟೈರ್‌ಗಳಿಗೂ ಬೆಂಕಿ ತಗುಲಿ ಭಾಗಶಃ ಹಾನಿಯಾಗಿದೆ.

ಅದೃಷ್ಟವಶಾತ್, ಎರಡೂ ವಾಹನಗಳ ಸಿಬ್ಬಂದಿ ತಕ್ಷಣವೇ ಕೆಳಗೆ ಜಿಗಿದು ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹತ್ತು ಟ್ಯಾಂಕರ್ ನೀರು, ಕಾರ್ಯಾಚರಣೆ:
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಅಗ್ನಿಶಾಮಕ ಕೇಂದ್ರಗಳಿಂದ 4 ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಬೆಳಿಗ್ಗೆ 10 ಗಂಟೆಯಿಂದ ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಸುಮಾರು 10 ಟ್ಯಾಂಕರ್‌ಗಳಷ್ಟು ನೀರು ಬಳಸಿ ಬೆಂಕಿ ನಂದಿಸಿದ್ದಾರೆ. ತೀವ್ರ ಉಷ್ಣಾಂಶದ ಹಿನ್ನೆಲೆಯಲ್ಲಿ ವಾಹನವನ್ನು ತಂಪುಗೊಳಿಸುವ ಕಾರ್ಯ ಮತ್ತು ಟ್ಯಾಂಕರ್‌ನಲ್ಲಿ ಉಳಿದಿರುವ ಇಂಧನವನ್ನು ಸುರಕ್ಷಿತವಾಗಿ ಹೊರತೆಗೆದು ವರ್ಗಾಯಿಸುವ ಕಾರ್ಯವನ್ನು ಟರ್ಮಿನಲ್ ಲಾಜಿಸ್ಟಿಕ್ಸ್ ತಂಡ ಕೈಗೊಂಡಿದೆ.
ಐಒಸಿಎಲ್ BDO ತಂಡದ ಮುಖ್ಯಸ್ಥರು, KASO ರಿಟೇಲ್ ಸೇಲ್ಸ್ ಮುಖ್ಯಸ್ಥರು, ದೇವನಗುಂದಿ ತಂಡದ ವಿಕಾಸ್ ಹಾಗೂ ಏರಿಯಾ ಸೇಲ್ಸ್ ಅಧಿಕಾರಿಯೊಂದಿಗೆ ಮಹೇಶ್ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕಾರ್ಯಾಚರಣೆಯ ನೇತೃತ್ವ ವಹಿಸಿದರು.
ಉತ್ಪನ್ನ ವಿಮೆಯ (Product Insurance) ಮಹತ್ವ:
ಈ ಟ್ಯಾಂಕರ್‌ಗೆ ವಾಹನ ವಿಮೆಯ ಜೊತೆಗೆ ‘ಉತ್ಪನ್ನ ವಿಮೆ’ ಕೂಡ ಇದ್ದ ಕಾರಣ, ಡೀಲರ್ ಶ್ರೀ ಅನಿಲ್ ಕುಮಾರ್ ಅವರಿಗೆ ಅಪಘಾತದಲ್ಲಿ ಕಳೆದುಹೋದ ಇಂಧನದ ಮೌಲ್ಯಕ್ಕೆ ಪರಿಹಾರ ಸಿಗಲಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲಿಯಂ ಟ್ಯಾಂಕರ್‌ಗಳಿಗೆ ‘ಉತ್ಪನ್ನ ವಿಮೆ’ಯನ್ನು ಕಡ್ಡಾಯಗೊಳಿಸಬೇಕು ಎಂದು NIPDA (National Indian Petroleum Dealers Association) ಬಲವಾಗಿ ಆಗ್ರಹಿಸಿದೆ.
ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳ ಸಮೀಪ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದು ಎನ್ ಐಪಿಡಿಎ ವಿನಂತಿಸಿದೆ.




















