ಬೆಂಗಳೂರು, ಜು.09 www.bengaluruwire.com: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿ ಆಯ್ಕೆ ಪ್ರಕ್ರಿಯೆ ಇದೀಗ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನೈತಿಕತೆಯ ಕೊರತೆ ಇದೆ ಎಂದು ಆರೋಪಿಸಿರುವ ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಪ್ರಮುಖ ಹಳೆಯ ವಿದ್ಯಾರ್ಥಿಗಳ ವೇದಿಕೆಯು, “ಕುರ್ಚಿಗಾಗಿ ಗೌರವ ಕಳೆದುಕೊಳ್ಳಬೇಡಿ” ಎಂದು ಆಕಾಂಕ್ಷಿಗಳಿಗೆ ಸಾರ್ವಜನಿಕವಾಗಿ ಕೊನೆಯ ಎಚ್ಚರಿಕೆ ನೀಡಿದೆ.
ಅಕ್ರಮದ ಆರೋಪ ಮತ್ತು ಶೋಧ ಸಮಿತಿ ನಡೆ:
ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ರಾಜ್ಯಪಾಲರು, ಸರ್ಕಾರ, ಮಾಧ್ಯಮಗಳು ಹಾಗೂ ನಾಗರಿಕ ಸಮಾಜಕ್ಕೆ ಮನವಿ ಸಲ್ಲಿಸಿದ್ದರೂ, ಶೋಧ ಸಮಿತಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಿರುವುದು ವಿಷಾದನೀಯ ಎಂದು ವೇದಿಕೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳ ಹೆಸರುಗಳು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದು, ಉಪಕುಲಪತಿ ಹುದ್ದೆಗಾಗಿ ಹಣ ಮತ್ತು ಪ್ರಭಾವ ಬಳಕೆಯ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿಗಳು ವಿಶ್ವಾಸಾರ್ಹ ಮೂಲಗಳಿಂದ ಕೇಳಿಬರುತ್ತಿವೆ ಎಂದು ವೇದಿಕೆ ಆರೋಪಿಸಿದೆ.
ಅನೈತಿಕ ಮಾರ್ಗ ಹಿಡಿದರೆ ಭವಿಷ್ಯದಲ್ಲಿ ಕಾದಿದೆ ತನಿಖೆ:
”ಉಪಕುಲಪತಿ ಹುದ್ದೆ ಯಾವುದೇ ಮಾರಾಟದ ವಸ್ತುವಲ್ಲ” ಎಂದು ಸ್ಪಷ್ಟಪಡಿಸಿರುವ ನಿವೃತ್ತ ಪ್ರಾಧ್ಯಾಪಕರು, ಆಯ್ಕೆ ಪ್ರಕ್ರಿಯೆಯ ನೈತಿಕತೆ ಮತ್ತು ಕಾನೂನುಬದ್ಧತೆ ಈಗಾಗಲೇ ಸಾರ್ವಜನಿಕ ಹಾಗೂ ಕಾನೂನು ಪರಿಶೀಲನೆಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ. ಹುದ್ದೆಗಾಗಿ ಅನೈತಿಕ ಮಾರ್ಗಗಳನ್ನು ಅನುಸರಿಸುವವರು ಭವಿಷ್ಯದಲ್ಲಿ ಈ ಕೆಳಗಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅರ್ಹತೆ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ಸ್ಪರ್ಧಿಸಿ:
ಹಣ ಮತ್ತು ಪ್ರಭಾವ ಬಳಸಿ ಹುದ್ದೆಯನ್ನು ಪಡೆಯಬಹುದು, ಆದರೆ ಸಮಾಜದ ಗೌರವ, ವಿಶ್ವಾಸ ಮತ್ತು ನೈತಿಕ ಮಾನ್ಯತೆ ಒಮ್ಮೆ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಅಸಾಧ್ಯ ಎಂದು ಆಕಾಂಕ್ಷಿಗಳಿಗೆ ಕಿವಿಮಾತು ಹೇಳಲಾಗಿದೆ. ಆದ್ದರಿಂದ, ಹಣಬಲ ಹಾಗೂ ಪ್ರಭಾವಬಲದ ಮಾರ್ಗವನ್ನು ತ್ಯಜಿಸಿ, ಕೇವಲ ಅರ್ಹತೆ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ಮಾತ್ರ ಸ್ಪರ್ಧಿಸುವಂತೆ ಬೆಂಗಳೂರು ಕೃಷಿ ವಿವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ನೇತೃತ್ವದ ವೇದಿಕೆ ಆಗ್ರಹಿಸಿದೆ.



















