ಮೈಸೂರು, ಜು.11 www.bengaluruwire.com: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ‘ಗಾನಕೋಗಿಲೆ’ ಎಸ್. ಜಾನಕಿ (88) ಅವರು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಶನಿವಾರ (ಜುಲೈ 11) ಸಂಜೆ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಆರು ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದ ‘ಜಾನಕಮ್ಮ’ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ:
ಸಂಗೀತ ಲೋಕದ ದಿಗ್ಗಜರ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಎಕ್ಸ್ (X) ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

”ಎಸ್. ಜಾನಕಿ ಅಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಸಾಧಾರಣ ಧ್ವನಿ ಭಾರತೀಯ ಸಂಗೀತವನ್ನು ಶ್ರೀಮಂತಗೊಳಿಸಿದೆ. ಆರು ದಶಕಗಳ ಕಾಲ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಶಾಸ್ತ್ರೀಯ, ಭಕ್ತಿ ಮತ್ತು ಜಾನಪದ ಸಂಯೋಜನೆಗಳ ಮೇಲೆ ಅವರು ಸಮಾನ ಪಾಂಡಿತ್ಯವನ್ನು ಪ್ರದರ್ಶಿಸಿದ್ದರು. ಅವರ ನಿಧನ ರಾಷ್ಟ್ರದ ಕಲಾತ್ಮಕ ಪರಂಪರೆಗೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ:
ಮೈಸೂರಿನಲ್ಲಿ ನಿಧನರಾಗಿರುವ ಗಾನಕೋಗಿಲೆ ಎಸ್ ಜಾನಕಿ ಅವರ ಕುಟುಂಬ ಸದಸ್ಯರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು.
ಮೇರುಗಾಯಕಿ ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಿಎಂ ಅವರು ಸೂಚನೆ ನೀಡಿದ್ದಾರೆ. ಸರಕಾರದ ಪರವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ನಿಯೋಜಿಸಲಾಗಿದೆ.
ಮರಣಕ್ಕೆ ನಿಖರ ಕಾರಣವೇನು? ಆಸ್ಪತ್ರೆ ಪ್ರಕಟಣೆ:
ಜಾನಕಿ ಅವರ ಸಾವಿನ ಕುರಿತು ಇದ್ದ ಗೊಂದಲಗಳಿಗೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಅಧಿಕೃತ ವೈದ್ಯಕೀಯ ಬುಲೆಟಿನ್ ಮೂಲಕ ತೆರೆ ಎಳೆದಿದೆ:
ದಾಖಲಾತಿ: ಜುಲೈ 11ರಂದು ಮಧ್ಯಾಹ್ನ 12:49ಕ್ಕೆ ತೀವ್ರ ಕಾಲಿನ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಸೋಂಕು ಮತ್ತು ಗ್ಯಾಂಗ್ರೀನ್: ಕಾಲಿಗೆ ಆಗಿದ್ದ ಗಾಯ ಗ್ಯಾಂಗ್ರೀನ್ ಆಗಿ ಪರಿವರ್ತನೆಯಾಗಿ ಇಡೀ ದೇಹಕ್ಕೆ ಸೋಂಕು (Infection) ಭಾರಿ ಪ್ರಮಾಣದಲ್ಲಿ ಹರಡಿತ್ತು.
ಐಸಿಯು ಚಿಕಿತ್ಸೆ: ಆಸ್ಪತ್ರೆಗೆ ತಂದಾಗ ಸ್ಥಿತಿ ಗಂಭೀರವಾಗಿದ್ದ ಕಾರಣ, ತಕ್ಷಣವೇ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿ ತಜ್ಞ ವೈದ್ಯರ ಬಹುಶಿಸ್ತೀಯ ತಂಡ (Multidisciplinary Team) ಚಿಕಿತ್ಸೆ ಆರಂಭಿಸಿತ್ತು.
ಹೃದಯ ಸ್ತಂಭನ (Cardiac Arrest): ಚಿಕಿತ್ಸೆ ಪ್ರಗತಿಯಲ್ಲಿರುವಾಗಲೇ ಸಂಜೆ ವೇಳೆಗೆ ಹಠಾತ್ ಹೃದಯಾಘಾತ ಸಂಭವಿಸಿದ್ದು, ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7:30ಕ್ಕೆ ಅವರು ಕೊನೆಯುಸಿರೆಳೆದರು.
ಪುತ್ರನ ಅಗಲಿಕೆಯ ದುಃಖದಲ್ಲಿದ್ದ ತಾಯಿ:
88ರ ಇಳಿವಯಸ್ಸಿನಲ್ಲಿ ಜಾನಕಿ ಅವರು ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ (65) ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದರು. ಕಳೆದ ಜನವರಿಯಲ್ಲಿ ಮುರಳಿ ಕೃಷ್ಣ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ಕಲಾ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ ಅವರೇ ಇಳಿವಯಸ್ಸಿನಲ್ಲಿ ತಾಯಿಗೆ ಏಕೈಕ ಆಸರೆಯಾಗಿದ್ದರು. ಕಣ್ಣೆದುರೇ ಮಗನ ಶವ ಕಂಡ ಜಾನಕಮ್ಮ ಅಕ್ಷರಶಃ ಜೀವಚ್ಛವವಾಗಿದ್ದರು. ಈ ಘಟನೆಯ ನಂತರ ಅವರು ತೀವ್ರ ಮಾನಸಿಕ ಖಿನ್ನತೆ ಮತ್ತು ದೈಹಿಕ ಬಳಲಿಕೆಗೆ ಒಳಗಾಗಿದ್ದರು ಎನ್ನಲಾಗಿದೆ.
ಸಂಗೀತ ಸಾಮ್ರಾಜ್ಯದ ಧ್ರುವತಾರೆ:
1950ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಜಾನಕಿ ಅವರು ‘ಧ್ವನಿ ಬದಲಾವಣೆಯ’ (Voice Modulation) ಮಾಂತ್ರಿಕಿಯಾಗಿದ್ದರು. ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೂ ಏಕಾಏಕಿ ಬದಲಾಗುವ ವಿಶೇಷ ಕಲೆ ಅವರಿಗೆ ಒಲಿದಿತ್ತು. ಕೇವಲ ಗಾಯನದಲ್ಲೇ ನಟನೆಯ ಭಾವನೆಗಳನ್ನು ತುಂಬುತ್ತಿದ್ದ ಗಾಯಕಿ, 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಅಜರಾಮರ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ.




















