ಬೆಂಗಳೂರು, ಜು.05 www.bengaluruwire.com: ರಾಜ್ಯದ ರೈತರಿಗೆ ವಂಚಿಸಲು ಯತ್ನಿಸುತ್ತಿದ್ದ ಅಕ್ರಮ ಬೀಜ ಮತ್ತು ರಸಗೊಬ್ಬರ ದಂಧೆಕೋರರ ವಿರುದ್ಧ ಕೃಷಿ ಇಲಾಖೆ ಸಮರ ಸಾರಿದೆ.
ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರೈತರಿಗೆ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವುದನ್ನು ತಡೆಯಲು ಕೃಷಿ ಇಲಾಖೆ ಆಯುಕ್ತರಾದ ಡಾ. ಬಿ.ಸಿ. ಸತೀಶ್ ಅವರ ಖಡಕ್ ಸೂಚನೆ ಮೇರೆಗೆ ಅಧಿಕಾರಿಗಳು ರಾಜ್ಯದ ವಿವಿಧೆಡೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ಭೇಟಿ ನೀಡಿ, ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೀಜ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಜಪ್ತಿ ಮಾಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ:

ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಅಕ್ರಮವಾಗಿ ದಾಸ್ತಾನು ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ:
ಸಾಲಗಾಮೆ ಹೋಬಳಿ: ಕೊಂಡಜ್ಜಿಕೊಪ್ಪಲುವಿನ ‘ಕಾರ್ತಿಕ ಟ್ರೇಡರ್ಸ್’ ಮೇಲೆ ದಾಳಿ ನಡೆಸಿ, ಬೀಜ ಕಾಯ್ದೆ 1966 ಉಲ್ಲಂಘಿಸಿ ಅನುಮತಿ ಇಲ್ಲದೇ ದಾಸ್ತಾನು ಮಾಡಲಾಗಿದ್ದ ಸುಮಾರು 85 ಸಾವಿರ ರೂ. ಮೌಲ್ಯದ 180 ಕೆ.ಜಿ. ಹೈಬ್ರೀಡ್ ಮೆಕ್ಕೆಜೋಳ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರಸೀಕೆರೆ ತಾಲೂಕು: ಜಾವಗಲ್ ಹೋಬಳಿಯ ‘ಪುಷ್ಪಗಿರಿ ಅಗ್ರೋ ಕೇಂದ್ರ’ದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 12 ಸಾವಿರ ರೂ. ಮೌಲ್ಯದ 30 ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಜಪ್ತಿಯಾಗಿದೆ.
ಬೇಲೂರು ತಾಲೂಕು: ಅರೇಹಳ್ಳಿ ಹೋಬಳಿಯ ಮದಿಹಳ್ಳಿಯ ‘ಶ್ರೀ ವೆಂಕಟೇಶ್ವರ ಟ್ರೇಡರ್ಸ್’ನಲ್ಲಿ ಕಾನೂನು ಉಲ್ಲಂಘಿಸಿ ದಾಸ್ತಾನು ಮಾಡಲಾಗಿದ್ದ ಸುಮಾರು 1.77 ಲಕ್ಷ ರೂ. ಮೌಲ್ಯದ 88 ಚೀಲ ಯೂರಿಯಾ ಹಾಗೂ ಪಾಸ್ಫೋ ಜಿಪ್ಸಮ್ ಗ್ರ್ಯಾನ್ಯುಲ್ಸ್ ವಶಕ್ಕೆ ಪಡೆಯಲಾಗಿದೆ.
ತುಮಕೂರು ಮತ್ತು ಮಂಡ್ಯದಲ್ಲಿ ಅಧಿಕಾರಿಗಳ ಹದ್ದಿನ ಕಣ್ಣು:
ತುಮಕೂರು ಜಿಲ್ಲೆ: ಮಧುಗಿರಿ ತಾಲೂಕಿನ ಮಿಡಗೇಶಿ ಹೋಬಳಿಯ ‘ಹಸಿರು ಹೈಟೆಕ್ ಸೀಡ್ಸ್’ ಕೇಂದ್ರದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 86 ಸಾವಿರ ರೂ. ಮೌಲ್ಯದ 22 ಲೀಟರ್ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ: ಇಂದುವಾಳದಲ್ಲಿ ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 300 ಚೀಲ ಎನ್.ಎಫ್.ಎಲ್. ಯೂರಿಯಾವನ್ನು ಮಂಡ್ಯದ ಕೃಷಿ ಅಧಿಕಾರಿಗಳು ಜುಲೈ 4ರ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಕೃಷಿ ಇಲಾಖೆಯ ಖಡಕ್ ಎಚ್ಚರಿಕೆ:
“ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ಯಾವುದೇ ರೀತಿಯ ನಿಯಮಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದರೆ, ಕೃಷಿ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ಇಲಾಖೆ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.






















