ಬೆಂಗಳೂರು, ಅ. 25 www.bengaluruwire.com: ರಾಜ್ಯದ ಖಾಸಗಿ ಹಾಗೂ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಉದ್ಯೋಗ ವಂಚನೆಯ ವಿರುದ್ಧ ಧ್ವನಿ ಎತ್ತಿದ್ದ ‘ಬೆಂಗಳೂರು ವೈರ್’ (Bengaluru Wire) ವರದಿ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ರೆಸ್ಯೂಮ್‌ನಲ್ಲಿ ಮಾತೃಭಾಷೆ ‘ಕನ್ನಡ’ ಎಂದಿದ್ದರೆ ಕೆಲಸ ನಿರಾಕರಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಖಾಸಗಿ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಏನಿದು ಪ್ರಕರಣ? ‘ಬೆಂಗಳೂರು ವೈರ್’ ವರದಿಯಲ್ಲಿ ಏನಿತ್ತು?:
ಕಳೆದ ಅಕ್ಟೋಬರ್ 23 ರಂದು “ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು” ಎಂಬ ಶೀರ್ಷಿಕೆಯಡಿ ‘ಬೆಂಗಳೂರು ವೈರ್’ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಉದ್ಯೋಗಾಕಾಂಕ್ಷಿಗಳ ರೆಸ್ಯೂಮ್‌ನಲ್ಲಿ (Resume) ಮಾತೃಭಾಷೆ ‘ಕನ್ನಡ’ ಎಂದು ನಮೂದಿಸಿದ್ದರೆ ಸಾಕು, ಅಂತಹ ಅರ್ಜಿಗಳನ್ನು ಮುಲಾಜಿಲ್ಲದೆ ಕಸದ ಬುಟ್ಟಿಗೆ ಎಸೆಯುವ ಅಘೋಷಿತ ನೀತಿಯೊಂದು ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಎಂದು ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವಿಡಿಯೋ ಹಂಚಿಕೊಂಡಿದ್ದರು. ಹೊರರಾಜ್ಯದವರ ಲಾಬಿಗೆ ಮಣಿದು ಸ್ಥಳೀಯ ಪ್ರತಿಭಾವಂತರನ್ನು ವ್ಯವಸ್ಥಿತವಾಗಿ ಹೊರಗಿಡುವ ಈ ಷಡ್ಯಂತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಆ ಮಹಿಳೆ, ಸರ್ಕಾರದ ಮೌನವನ್ನು ತೀವ್ರವಾಗಿ ಪ್ರಶ್ನಿಸಿದ್ದರು.

ಟೌನ್‌ಶಿಪ್ ಭರವಸೆಗೆ ಮಹಿಳೆಯ ಚಾಟಿ ಏಟು:
ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ವೈರಲ್ ವಿಡಿಯೋದಲ್ಲಿ ನೇರವಾಗಿ ಪ್ರಶ್ನಿಸಿದ್ದರು. “ಹೊಸ ಟೌನ್‌ಶಿಪ್ ಮಾಡಿ ಉದ್ಯೋಗ ಕೊಡುವುದು ಆಮೇಲಿರಲಿ, ಮೊದಲು ಈಗಾಗಲೇ ರಾಜ್ಯದಲ್ಲಿ ತಲೆಎತ್ತಿರುವ ಸಾವಿರಾರು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಘೋರ ಅನ್ಯಾಯವನ್ನು ತಡೆಯಿರಿ. ಇರುವ ಕಂಪನಿಗಳಲ್ಲೇ ಕನ್ನಡಿಗರಿಗೆ ಕೆಲಸ ಕೊಡಿಸಲು ಸಾಧ್ಯವಾಗದಿದ್ದರೆ, ಹೊಸ ಟೌನ್‌ಶಿಪ್ ನಿರ್ಮಿಸಿ ಅಲ್ಲಿಯೂ ಹೊರರಾಜ್ಯದವರನ್ನೇ ತುಂಬುತ್ತೀರಾ?” ಎಂಬ ಪ್ರಶ್ನೆ ಮುಂದಿಟ್ಟು ‘ಬೆಂಗಳೂರು ವೈರ್’ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿತ್ತು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ: ಸಿಎಂ ಡಿ.ಕೆ. ಶಿವಕುಮಾರ್ ಅಭಯ:
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಈ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಭಾನುವಾರ ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
”ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಕಂಪನಿಗಳಿಗೆ ಖಡಕ್ ಎಚ್ಚರಿಕೆ:
ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ ಎಂದು ಸಿಎಂ ಶ್ಲಾಘಿಸಿದ್ದಾರೆ.
ಇದೇ ವೇಳೆ ಕನ್ನಡ ವಿರೋಧಿ ಧೋರಣೆ ತಳೆಯುವ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿರುವ ಅವರು, “ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ” ಎಂದು ಭರವಸೆ ನೀಡಿದ್ದಾರೆ. ಸರ್ಕಾರದ ಈ ಭರವಸೆ ಕೇವಲ ಎಕ್ಸ್ ಪೋಸ್ಟ್ ಗೆ ಸೀಮಿತವಾಗದೆ, ತಳಮಟ್ಟದಲ್ಲಿ ಕನ್ನಡಿಗರಿಗೆ ನ್ಯಾಯ ಒದಗಿಸುವಲ್ಲಿ ಕಾರ್ಯರೂಪಕ್ಕೆ ಬರಲಿ ಎಂಬುದು ಸಮಸ್ತ ಕನ್ನಡಿಗರ ಆಶಯವಾಗಿದೆ.


















