ನವದೆಹಲಿ/ಬೆಂಗಳೂರು, ಆ.04 www.bengaluruwire.com: ಆನ್‌ಲೈನ್ ವಂಚಕರು ಈಗ ಜನರನ್ನು ಯಾಮಾರಿಸಲು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಸಾಲಿಗೆ ಇದೀಗ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋವೊಂದು ಸೇರ್ಪಡೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಏನಿದು ನಕಲಿ ವಿಡಿಯೋ?:
ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೂಡಿಕೆ ಯೋಜನೆಯೊಂದನ್ನು ಪ್ರಚಾರ ಮಾಡುತ್ತಿರುವ ವಿಡಿಯೋವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಕೇವಲ ₹22,000 ಹೂಡಿಕೆ ಮಾಡಿದರೆ, ವಾರಕ್ಕೆ ₹5 ಲಕ್ಷ ಹಾಗೂ ತಿಂಗಳಿಗೆ ₹22 ಲಕ್ಷದವರೆಗೆ ಖಚಿತ ಆದಾಯ ನೀಡುವ ಪ್ಲಾಟ್‌ಫಾರ್ಮ್ ಅನ್ನು ಸಚಿವರು ಬೆಂಬಲಿಸುತ್ತಿದ್ದಾರೆ ಎಂಬಂತೆ ಈ ವಿಡಿಯೋದಲ್ಲಿ ಬಿಂಬಿಸಲಾಗಿದೆ.
ಪಿಐಬಿ (PIB) ಫ್ಯಾಕ್ಟ್ ಚೆಕ್ ಸ್ಪಷ್ಟನೆ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಘಟಕ, ಇದೊಂದು ‘ಡೀಪ್‌ಫೇಕ್’ ವಿಡಿಯೋ (ಸಂಪೂರ್ಣ ನಕಲಿ) ಎಂದು ಸ್ಪಷ್ಟಪಡಿಸಿದೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸಚಿವರ ಮುಖ ಮತ್ತು ಧ್ವನಿಯನ್ನು ತಿರುಚಲಾಗಿದೆ.
ಕೇಂದ್ರ ಸರ್ಕಾರವಾಗಲಿ ಅಥವಾ ಕೇಂದ್ರ ಹಣಕಾಸು ಸಚಿವರಾಗಲಿ ಇಂತಹ ಯಾವುದೇ ಹೂಡಿಕೆ ಯೋಜನೆಗೆ ಅಥವಾ ಪ್ಲಾಟ್‌ಫಾರ್ಮ್‌ಗೆ ಅನುಮೋದನೆ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ವಂಚನೆಗೊಳಗಾಗದಿರಿ, ಎಚ್ಚರ ವಹಿಸಿ:
ಆನ್‌ಲೈನ್ ವಂಚಕರು ಜನರನ್ನು ನಂಬಿಸಲು ಗಣ್ಯ ವ್ಯಕ್ತಿಗಳ ನಕಲಿ ವಿಡಿಯೋಗಳನ್ನು (AI Deepfake) ಸೃಷ್ಟಿಸಿ, ರಾತ್ರೋರಾತ್ರಿ ಶ್ರೀಮಂತರಾಗುವ ಆಮಿಷವೊಡ್ಡುತ್ತಾರೆ.
* ಇಂತಹ ಸುಳ್ಳು ಭರವಸೆಗಳನ್ನು ನೀಡುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.
* ಯಾವುದೇ ಅಪರಿಚಿತ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಅಧಿಕೃತ ಮೂಲಗಳನ್ನು ಪರಿಶೀಲಿಸಬೇಕು.
* ನಿಮ್ಮ ಬ್ಯಾಂಕ್ ಖಾತೆ, ಒಟಿಪಿ (OTP) ಅಥವಾ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಅನುಮಾನಾಸ್ಪದ ಮಾಹಿತಿ ಕಂಡುಬಂದರೆ ದೂರು ನೀಡಿ:
ಇಂತಹ ನಕಲಿ ಹಾಗೂ ಅನುಮಾನಾಸ್ಪದ ವಿಡಿಯೋಗಳು ಅಥವಾ ಸುದ್ದಿಗಳು ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ PIB Fact Check ತಂಡಕ್ಕೆ ವರದಿ ಮಾಡುವ ಮೂಲಕ ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಯಿರಿ. WhatsApp: +91 8799711259 ಅಥವಾ Email: factcheck@pib.gov.in






















