ನವದೆಹಲಿ, ಜು.28 www.bengaluruwire.com:
ಭಾರತದಲ್ಲಿ ಅತಿ ಶ್ರೀಮಂತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿರುವ ಮಾಹಿತಿಯ ಪ್ರಕಾರ, 2025-26ನೇ ಮೌಲ್ಯಮಾಪನ ವರ್ಷದಲ್ಲಿ (Assessment Year) 100 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಘೋಷಿಸಿಕೊಂಡವರ ಸಂಖ್ಯೆ 576ಕ್ಕೆ ತಲುಪಿದೆ.
ಕಳೆದ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ (ITR) ದತ್ತಾಂಶವನ್ನು ಗಮನಿಸಿದರೆ, ಈ ಸಂಖ್ಯೆ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಾಗಿರುವುದು ಸ್ಪಷ್ಟವಾಗಿದೆ.
ಐದು ವರ್ಷಗಳಲ್ಲಿ ಬದಲಾದ ಅಂಕಿ-ಅಂಶ:

2021-22ರ ಅವಧಿಯಲ್ಲಿ 100 ಕೋಟಿ ರೂ.ಗೂ ಹೆಚ್ಚು ಆದಾಯ ಹೊಂದಿದ್ದವರ ಸಂಖ್ಯೆ ಕೇವಲ 142 ಇತ್ತು. ಆದರೆ, ನಂತರದ ವರ್ಷಗಳಲ್ಲಿ ಈ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ವರ್ಷವಾರು ದತ್ತಾಂಶ ಈ ಕೆಳಗಿನಂತಿದೆ:
2021-22: 142 ವ್ಯಕ್ತಿಗಳು
2022-23: 301 ವ್ಯಕ್ತಿಗಳು
2023-24: 284 ವ್ಯಕ್ತಿಗಳು
2024-25: 415 ವ್ಯಕ್ತಿಗಳು
2025-26: 576 ವ್ಯಕ್ತಿಗಳು
’ಬಿಲಿಯನೇರ್’ ಪದಕ್ಕೆ ನಿಖರ ವ್ಯಾಖ್ಯಾನವಿಲ್ಲ:
ಆದಾಯ ತೆರಿಗೆ ಕಾಯ್ದೆ 2025 ಅಥವಾ ಹಿಂದಿನ 1961ರ ಕಾಯ್ದೆಯಡಿ ‘ಬಿಲಿಯನೇರ್’ (ಶತಕೋಟ್ಯಾಧಿಪತಿ) ಎಂಬ ಪದಕ್ಕೆ ಯಾವುದೇ ಕಾನೂನುಬದ್ಧ ವ್ಯಾಖ್ಯಾನವಿಲ್ಲ. ಆದರೆ 100 ಕೋಟಿ ರೂ.ಗೂ ಅಧಿಕ ವಾರ್ಷಿಕ ಆದಾಯ ಘೋಷಿಸಿದವರನ್ನು ಈ ಪಟ್ಟಿಯಲ್ಲಿ ಪರಿಗಣಿಸಿ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ, 2016ರಲ್ಲೇ ಸಂಪತ್ತು ತೆರಿಗೆಯನ್ನು (Wealth-tax Act) ರದ್ದುಪಡಿಸಿರುವುದರಿಂದ ತೆರಿಗೆದಾರರ ಒಟ್ಟು ಸಂಪತ್ತಿನ ಡೇಟಾವನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಆರ್ಥಿಕ ಅಸಮಾನತೆ ಹಾಗೂ ಉದ್ಯೋಗ ಸೃಷ್ಟಿ:
ಸಂಪತ್ತಿನ ಕ್ರೋಢೀಕರಣ ಮತ್ತು ಆರ್ಥಿಕ ಅಸಮಾನತೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವಾಲಯ, ದೇಶದಲ್ಲಿ ನಿರುದ್ಯೋಗ ದರ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ. ಕಾರ್ಮಿಕ ಬಲ ಸಮೀಕ್ಷೆ (PLFS) ಪ್ರಕಾರ, 2022ರಲ್ಲಿದ್ದ ಶೇ. 3.6ರಷ್ಟು ನಿರುದ್ಯೋಗ ದರ 2025ರಲ್ಲಿ ಶೇ. 3.1ಕ್ಕೆ ತಗ್ಗಿದೆ. ಆದಾಯ ತೆರಿಗೆಯ ಪ್ರಗತಿಪರ ರಚನೆ, ವಸತಿ, ಆರೋಗ್ಯ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುವ ಮೂಲಕ ಅಸಮಾನತೆ ಕಡಿಮೆ ಮಾಡಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂಬ ಮಾಹಿತಿಯನ್ನು ಸಂಸತ್ತಿಗೆ ನೀಡಲಾಗಿದೆ.





















