ಬೆಂಗಳೂರು, ಆ.03 www.bengaluruwire.com : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ರಮವು ಇದೀಗ ಅಂತಿಮ ಹಂತ ತಲುಪಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಬೂತ್ ಮಟ್ಟದ ಅಧಿಕಾರಿಗಳ (BLOs) ಹಾಗೂ ಗಣತಿದಾರರ ಮನೆ-ಮನೆ ಭೇಟಿ ಕಾರ್ಯ ಮತ್ತು ಗಣತಿ ನಮೂನೆಗಳ ಸಂಗ್ರಹಣೆ ಪ್ರಕ್ರಿಯೆಯು ಇದೇ ಆಗಸ್ಟ್ 8 ರಂದು ಮುಕ್ತಾಯಗೊಳ್ಳಲಿದೆ.
ಆಗಸ್ಟ್ 8ರೊಳಗೆ ಗಣತಿ ನಮೂನೆ ಸಲ್ಲಿಕೆ ಕಡ್ಡಾಯ:
ಬೆಂಗಳೂರು ಉತ್ತರ ವ್ಯಾಪ್ತಿಯ ಎಲ್ಲಾ ಅರ್ಹ ಮತದಾರರು ಆಗಸ್ಟ್ 8 ರೊಳಗೆ ಕಡ್ಡಾಯವಾಗಿ ತಮ್ಮ ಗಣತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಸಮಸ್ಯೆ ಇದ್ದರೆ ‘1950’ಗೆ ಕರೆ ಮಾಡಿ:
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ದೂರುಗಳಿದ್ದರೆ, ವಿಳಂಬ ಮಾಡದೆ ತಕ್ಷಣವೇ ಉಚಿತ ಸಹಾಯವಾಣಿ ಸಂಖ್ಯೆ 1950 ನ್ನು ಸಂಪರ್ಕಿಸಬಹುದು.
ಸಹಾಯವಾಣಿ (1950) ಮೂಲಕ ಲಭ್ಯವಿರುವ ಸೇವೆಗಳು:
* ಗಣತಿದಾರರು ಅಥವಾ ಬಿಎಲ್ ಒ (BLO) ರವರು ಮನೆಗೆ ಭೇಟಿ ನೀಡದಿದ್ದರೆ ದೂರು ನೀಡಲು.
* ಗಣತಿ ನಮೂನೆ ಲಭ್ಯವಾಗದಿರುವ ಬಗ್ಗೆ ಮಾಹಿತಿ ನೀಡಲು.
* ನಮೂನೆ ಭರ್ತಿ ಮಾಡುವ ವಿಧಾನ ಹಾಗೂ ಅಗತ್ಯ ದಾಖಲೆಗಳ ಕುರಿತು ಮಾಹಿತಿ ಪಡೆಯಲು.
* ಸಲ್ಲಿಸಿದ ನಮೂನೆಗಳ ಸ್ವೀಕಾರ ಅಥವಾ ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ.
* ಮತದಾರರ ವಿವರಗಳಲ್ಲಿನ ತಿದ್ದುಪಡಿ, ಸೇರ್ಪಡೆ ಅಥವಾ ಇತರೆ ಮಾರ್ಗದರ್ಶನಕ್ಕಾಗಿ.
*ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ದೂರು ದಾಖಲಿಸಿ, ತ್ವರಿತ ಪರಿಹಾರ ಕಂಡುಕೊಳ್ಳಲು.
ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಮುಖ ದಿನಾಂಕಗಳು:
08 ಆಗಸ್ಟ್ 2026: ಮನೆ-ಮನೆ ಭೇಟಿ ಹಾಗೂ ಗಣತಿ ನಮೂನೆಗಳ ಸಂಗ್ರಹಣೆಯ ಕಡೆಯ ದಿನ.
17 ಆಗಸ್ಟ್ 2026: ಕರಡು ಮತದಾರರ ಪಟ್ಟಿ ಪ್ರಕಟಣೆ.
17 ಆಗಸ್ಟ್ ನಿಂದ 16 ಸೆಪ್ಟೆಂಬರ್ 2026: ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ.
19 ಅಕ್ಟೋಬರ್ 2026: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಪ್ರತಿಯೊಬ್ಬ ಅರ್ಹ ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ತಮ್ಮ ವಿವರಗಳನ್ನು ದೃಢೀಕರಿಸುವ ಮೂಲಕ ಶುದ್ಧ, ನಿಖರ ಹಾಗೂ ಸಮಗ್ರ ಮತದಾರರ ಪಟ್ಟಿಯ ಸಿದ್ಧತೆಗೆ ಕೈಜೋಡಿಸುವಂತೆ ಚುನಾವಣಾಧಿಕಾರಿಗಳು ಕೋರಿದ್ದಾರೆ.




















