ಬೆಂಗಳೂರು, ಜು.16 www.bengaluruwire.com: ಸಿಎಂಐಡಿಪಿ ಹಾಗೂ ಸಿಎಸ್ಎಸ್ಐಪಿ ಅನುದಾನದಡಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ವಿಭಾಗದ ಅಧಿಕಾರಿಗಳು, ಯೋಜನಾ ನಿರ್ವಹಣಾ ಸಲಹೆಗಾರರು (PMC) ಹಾಗೂ ಕಾಮಗಾರಿ ವಿಭಾಗದ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಪಿಎಂಸಿ ವತಿಯಿಂದ ಸಲ್ಲಿಸಲಾದ ಗುಣಮಟ್ಟ ಪರಿಶೀಲನಾ ವರದಿಯನ್ನು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು.
ವರದಿ ಹಾಗೂ ಗುಣಮಟ್ಟ ಪರಿಶೀಲನೆ ಕಡ್ಡಾಯ:
ರಸ್ತೆ ಹಾಗೂ ಸಿವಿಲ್ ಕಾಮಗಾರಿಗಳಲ್ಲಿ ಯಾವುದೇ ತಾಂತ್ರಿಕ ಕೊರತೆಗಳು ಕಂಡುಬಂದರೆ ತಕ್ಷಣವೇ ಸರಿಪಡಿಸಬೇಕು. ಪ್ರತಿಯೊಂದು ಕಾಮಗಾರಿಯೂ ನಿಗದಿತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣಗೊಂಡಿರುವುದನ್ನು ಗುಣಮಟ್ಟ ನಿಯಂತ್ರಣ ವಿಭಾಗ ಹಾಗೂ ಪಿಎಂಸಿ ತಂಡಗಳು ಜಂಟಿಯಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.

ರಸ್ತೆ ಅಗೆದರೆ ಕಠಿಣ ಕ್ರಮ:
ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಯಾವುದೇ ಇಲಾಖೆಗಳು ರಸ್ತೆ ಅಗೆಯುವಂತಿಲ್ಲ. ಒಂದು ವೇಳೆ ಯುಟಿಲಿಟಿ ಕಾಮಗಾರಿಗಾಗಿ ರಸ್ತೆ ಅಗೆದರೆ, ಸಂಬಂಧಪಟ್ಟ ಇಲಾಖೆಗೆ ತಕ್ಷಣವೇ ನೋಟಿಸ್ ಜಾರಿ ಮಾಡಿ, ರಸ್ತೆಯನ್ನು ಮೂಲ ಸ್ಥಿತಿಗೆ ತರುವಂತೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎಲ್ಲಾ ಸೇವಾ ಪೂರೈಕೆ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛತೆ ಹಾಗೂ ಸುರಕ್ಷತೆಗೆ ಮೊದಲ ಆದ್ಯತೆ
ಹೂಳೆತ್ತುವಿಕೆ: ರಸ್ತೆಬದಿ ಚರಂಡಿಗಳಲ್ಲಿ ಶೇಕಡಾ 100ರಷ್ಟು ಹೂಳೆತ್ತುವಿಕೆ ಕಾರ್ಯ ಪೂರ್ಣಗೊಳ್ಳಬೇಕು.
ತ್ಯಾಜ್ಯ ತೆರವು: ಕಾಮಗಾರಿ ಪ್ರದೇಶದಲ್ಲಿ ನಿರ್ಮಾಣ ತ್ಯಾಜ್ಯ ಉಳಿಯದಂತೆ ಸಂಪೂರ್ಣವಾಗಿ ತೆರವುಗೊಳಿಸಿ, ಸಾರ್ವಜನಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು.
ಡಾಂಬರೀಕರಣ: ಚರಂಡಿ ಮತ್ತು ಇತರೆ ಸಿವಿಲ್ ಕಾಮಗಾರಿಗಳ ಗುಣಮಟ್ಟವನ್ನು ಪ್ರಮಾಣೀಕರಿಸಿದ ನಂತರವೇ ಆಸ್ಫಾಲ್ಟಿಂಗ್ (ಡಾಂಬರೀಕರಣ) ಹಾಗೂ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.
ಬಾಕಿ ಕಾಮಗಾರಿಗಳಿಗೆ ಡೆಡ್ಲೈನ್:
ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿ, ಸ್ಪಷ್ಟ ಕಾಲಮಿತಿಯೊಂದಿಗೆ (ಡೆಡ್ಲೈನ್) ಕಾರ್ಯಯೋಜನೆ ರೂಪಿಸಬೇಕು. ವಿಳಂಬವಾಗುವ ಕಾಮಗಾರಿಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅಪರ ಆಯುಕ್ತರು ಗುತ್ತಿಗೆದಾರರು ಹಾಗೂ ಪಿಎಂಸಿ ತಂಡಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕೆ.ಆರ್.ಪುರ ವಲಯದ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.






















