ಬೆಂಗಳೂರು, ಜು.15 www.bengaluruwire.com: ಕೇಂದ್ರ ಚುನಾವಣಾ ಆಯೋಗವು ಅಕ್ಟೋಬರ್ 10 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದರ ಜೊತೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ರಾಜ್ಯದ 5.54 ಕೋಟಿ ಮತದಾರರ ಪೈಕಿ ಶೇ. 95.58 ರಷ್ಟು ಜನರಿಗೆ ನಮೂನೆಗಳನ್ನು ವಿತರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿ. ಅನ್ಬುಕುಮಾರ್ ಬುಧವಾರ ತಿಳಿಸಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯ ವಿವರಗಳು:
ಭಾರತ ಚುನಾವಣಾ ಆಯೋಗವು ದಿನಾಂಕ 15ನೇ ಜುಲೈ 2026 ರಂದು ಹೊರಡಿಸಿರುವ ಆದೇಶದಂತೆ ವಿಶೇಷ ಸಮಗ್ರ ಪರಿಷ್ಕರಣೆಯ ಚಟುವಟಿಕೆಗಳ ಪರಿಷ್ಕೃತ ವೇಳಾಪಟ್ಟಿ ಈ ಕೆಳಗಿನಂತಿದೆ:

ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ: 30.06.2026 ರಿಂದ 08.08.2026 ರವರೆಗೆ
ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ/ಮರುಜೋಡಣೆ: 08.08.2026
ಕರಡು ಮತದಾರರ ಪಟ್ಟಿಯ ಪ್ರಕಟಣೆ: 17.08.2026 (ಸೋಮವಾರ)
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ: 17.08.2026 ರಿಂದ 16.09.2026 ರವರೆಗೆ
ನೋಟಿಸ್ ಹಂತ / ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ: 17.08.2026 ರಿಂದ 15.10.2026 ರವರೆಗೆ
ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ: 19.10.2026 (ಸೋಮವಾರ)
ನಮೂನೆ ವಿತರಣೆ ಮತ್ತು ಡಿಜಿಟಲೀಕರಣದಲ್ಲಿ ಮುನ್ನಡೆ:
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಇಒ ಅನ್ಬುಕುಮಾರ್, “ರಾಜ್ಯದ 5,54,32,314 ನೋಂದಾಯಿತ ಮತದಾರರ ಪೈಕಿ 5,29,82,909 ಮತದಾರರಿಗೆ ನಮೂನೆಗಳನ್ನು ವಿತರಿಸಲಾಗಿದ್ದು, ಶೇ. 95.58 ರಷ್ಟು ವಿತರಣೆ ಪೂರ್ಣಗೊಂಡಿದೆ” ಎಂದರು.
“ಈವರೆಗೆ 2,20,77,772 ಮತದಾರರ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ನಮೂನೆಗಳ ಶೇ. 39.83 ರಷ್ಟಾಗಿದೆ. ಅಲ್ಲದೆ, 4,26,233 ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿವೆ” ಎಂದು ಅವರು ವಿವರಿಸಿದರು.
ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ಯಾದಗಿರಿ, ಕೊಡಗು ಮತ್ತು ಹಾಸನ ಸೇರಿದಂತೆ ಒಟ್ಟು 13 ಜಿಲ್ಲೆಗಳು ಶೇ. 100 ರಷ್ಟು ನಮೂನೆ ವಿತರಣೆಯನ್ನು ಪೂರ್ಣಗೊಳಿಸಿವೆ.
ಉಳಿದಂತೆ ಸುಮಾರು 11 ಜಿಲ್ಲೆಗಳು ಶೇ. 99ರ ಗಡಿ ದಾಟಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅನ್ಬುಕುಮಾರ್ ಅವರು ಮಾಹಿತಿ ನೀಡಿದರು.
ಡಿಜಿಟಲೀಕರಣದಲ್ಲಿ ಶೇ. 64 ರೊಂದಿಗೆ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದ್ದರೆ, ಹಾವೇರಿ (ಶೇ. 62), ದಾವಣಗೆರೆ (ಶೇ. 59), ಕೊಪ್ಪಳ (ಶೇ. 58), ಹಾಸನ (ಶೇ. 57) ಮತ್ತು ಚಿತ್ರದುರ್ಗ (ಶೇ. 56) ನಂತರದ ಸ್ಥಾನಗಳಲ್ಲಿವೆ. ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಯಕೊಂಡ ಶೇ. 83.36 ರಷ್ಟು ಡಿಜಿಟಲೀಕರಣದೊಂದಿಗೆ ಮುಂಚೂಣಿಯಲ್ಲಿದೆ.
ಬೆಂಗಳೂರಿನ ಸ್ಥಿತಿಗತಿ ಹಾಗೂ ASDO ಪಟ್ಟಿ:
ಬೆಂಗಳೂರು ನಗರದ 1.03 ಕೋಟಿ ಮತದಾರರ ಪೈಕಿ ಸುಮಾರು 82 ಲಕ್ಷ ಮತದಾರರಿಗೆ ನಮೂನೆಗಳನ್ನು ಹಂಚಲಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಿಧಾನವಾಗಿದ್ದರೂ, ಪ್ರಸ್ತುತ ವೇಗ ಪಡೆದುಕೊಂಡಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಈವರೆಗೆ 1,31,626 ಬೂತ್ ಮಟ್ಟದ ಏಜೆಂಟರನ್ನು (BLA) ನೇಮಿಸಿದ್ದು, ಪರಿಶೀಲನೆಗಾಗಿ ASDO (ಗೈರುಹಾಜರಾದ, ಸ್ಥಳಾಂತರಗೊಂಡ, ನಕಲಿ, ಮೃತ ಮತ್ತು ಇತರ) ಪಟ್ಟಿಗಳನ್ನು ಅವರೊಂದಿಗೆ ಹಂಚಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಎಎಸ್ಡಿಒ ಪಟ್ಟಿಯಲ್ಲಿ 13,96,012 ನಮೂದುಗಳಿವೆ. ಅರ್ಹ ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಪಟ್ಟಿಗಳನ್ನು ಪರಿಶೀಲಿಸುವಂತೆ ರಾಜಕೀಯ ಪಕ್ಷಗಳು ಹಾಗೂ ಬಿಎಲ್ಎಗಳಿಗೆ ಅವರು ಮನವಿ ಮಾಡಿದರು.
ಇನ್ನು ನಮೂನೆಗಳನ್ನು ಸ್ವೀಕರಿಸದ ಮತದಾರರಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ಅವುಗಳನ್ನು ತಲುಪಿಸಲಾಗುವುದು ಹಾಗೂ ಸ್ವೀಕರಿಸಿದವರು ಅದನ್ನು ಭರ್ತಿಮಾಡಿ ಹಿಂದಿರುಗಿಸುವಂತೆ ಅವರು ತಿಳಿಸಿದರು.






















