ಬೆಂಗಳೂರು, ಜು.11 www.bengaluruwire.com: ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ನಿಯಮ ಉಲ್ಲಂಘಿಸುವ ಬೃಹತ್ ತ್ಯಾಜ್ಯ ಉತ್ಪಾದಕರ (Bulk Waste Generators) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಬೃಹತ್ ತ್ಯಾಜ್ಯ ಉತ್ಪಾದಕರು, ಘನತ್ಯಾಜ್ಯ ವಿಭಾಗದ ಎಜಿಎಂಗಳು ಹಾಗೂ ಮಾರ್ಷಲ್‌ಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
ಅನಧಿಕೃತ ಉತ್ಪಾದಕರ ಪತ್ತೆಗೆ ಸೂಚನೆ:
ಪಶ್ಚಿಮ ವಲಯದಲ್ಲಿ ಪ್ರಸ್ತುತ 1,552 ನೋಂದಾಯಿತ ಬೃಹತ್ ತ್ಯಾಜ್ಯ ಉತ್ಪಾದಕರಿದ್ದಾರೆ. ಆದರೆ, ನಿಯಮಗಳ ಚೌಕಟ್ಟಿನಿಂದ ಹೊರಗುಳಿದು ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವವರನ್ನು ಶೀಘ್ರವೇ ಗುರುತಿಸುವ ಕೆಲಸವಾಗಬೇಕಿದೆ. ಈ ಬಗ್ಗೆ ಎಜಿಎಂಗಳು, ಕಿರಿಯ ಆರೋಗ್ಯ ಪರಿವೀಕ್ಷಕರು (ಜೆಎಚ್‌ಐ) ಹಾಗೂ ಮಾರ್ಷಲ್‌ಗಳು ನಿಗಾ ವಹಿಸಬೇಕು. ಇದರಲ್ಲಿ ನಿವಾಸಿಗಳ ಕಲ್ಯಾಣ ಸಂಘಗಳು (RWAs) ಕೂಡ ಪಾಲಿಕೆಗೆ ಮಾಹಿತಿ ನೀಡುವ ಮೂಲಕ ಕೈಜೋಡಿಸುವಂತೆ ಆಯುಕ್ತರು ಸೂಚಿಸಿದರು.

ಸ್ಥಳದಲ್ಲೇ ಸಂಸ್ಕರಣೆ ಅಥವಾ ಅಧಿಕೃತ ಸಂಸ್ಥೆಗೆ ಹಸ್ತಾಂತರ:
ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ಆವರಣದಲ್ಲೇ ತ್ಯಾಜ್ಯ ಸಂಸ್ಕರಿಸಿ, ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಅತ್ಯುತ್ತಮ. ಇದು ಸಾಧ್ಯವಾಗದಿದ್ದರೆ, ಪಾಲಿಕೆ ನಿಗದಿಪಡಿಸಿದ ಅಧಿಕೃತ ಸಂಸ್ಥೆಗಳಿಗೆ (ಮೆಟೀರಿಯಲ್ ಸೊಲ್ಯೂಷನ್ಸ್ ಫಾರ್ ಗ್ರೀನ್ ಪ್ಲಾನೆಟ್ – ಎಂಎಸ್‌ಜಿಪಿ ಮತ್ತು ಸ್ವಚ್ಛ ಇಕೋ ಸೊಲ್ಯೂಷನ್ಸ್) ನಿಗದಿತ ಶುಲ್ಕ ಪಾವತಿಸಿ ತ್ಯಾಜ್ಯ ನೀಡಬೇಕು. ಕಸದ ಸಮಸ್ಯೆ ಬಗ್ಗೆ ಪರಸ್ಪರ ದೂರುತ್ತ ಕುಳಿತುಕೊಳ್ಳುವ ಬದಲು, ಅನಧಿಕೃತ ವೆಂಡರ್‌ಗಳಿಗೆ ಕಸ ನೀಡುವುದನ್ನು ನಿಲ್ಲಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೊಸ ಟ್ರಾನ್ಸ್‌ಫರ್ ಸ್ಟೇಷನ್‌ಗಳ ಸ್ಥಾಪನೆ:
ರಸ್ತೆಯಲ್ಲಿ ತ್ಯಾಜ್ಯ ಸಾಗಾಟದ ವೇಳೆ ಕಸದ ನೀರು (Leachate) ಸೋರಿಕೆಯಾಗುವುದನ್ನು ಸಂಪೂರ್ಣವಾಗಿ ತಪ್ಪಿಸಲು, ಕಸ ಸಂಗ್ರಹಣೆಯ ಲಾರಿ ಪಾಯಿಂಟ್‌ಗಳನ್ನು ಆಧುನಿಕ ‘ಟ್ರಾನ್ಸ್‌ಫರ್ ಸ್ಟೇಷನ್’ಗಳನ್ನಾಗಿ ಪರಿವರ್ತಿಸಲು ಪಾಲಿಕೆ ನಿರ್ಧರಿಸಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಈ ವ್ಯವಸ್ಥೆ ಸ್ಥಾಪನೆಯಾಗಲಿದೆ.
ಕಡ್ಡಾಯ ನೋಂದಣಿ ಮತ್ತು 4 ವಿಭಾಗಗಳಲ್ಲಿ ವಿಂಗಡಣೆ:
2026ರ ಏಪ್ರಿಲ್ 1ರಿಂದ ಹೊಸ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು ಜಾರಿಗೆ ಬಂದಿದ್ದು, ಸುಪ್ರೀಂ ಕೋರ್ಟ್ ನೇರ ಉಸ್ತುವಾರಿ ವಹಿಸಿದೆ ಎಂದು ಬಿಎಸ್‌ಡಬ್ಲ್ಯೂಎಂಎಲ್ (BSWML) ಸಿಒಒ ರಮಾಮಣಿ ಮಾಹಿತಿ ನೀಡಿದರು.
* ಬೃಹತ್ ತ್ಯಾಜ್ಯ ಉತ್ಪಾದಕರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (CPCB) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
* ಕಸವನ್ನು ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯ (Special Care Waste) ಎಂದು ಕಡ್ಡಾಯವಾಗಿ 4 ವಿಭಾಗಗಳಲ್ಲಿ ವರ್ಗೀಕರಿಸಿಯೇ ನೀಡಬೇಕು.
* ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು, ಸುಡುವುದು ಅಥವಾ ಜಲಮೂಲಗಳಿಗೆ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಕಮಾಂಡ್ ಸೆಂಟರ್ ಮೂಲಕ ಹದ್ದಿನ ಕಣ್ಣಿಟ್ಟು ನಿಗಾವಹಿಸಲಾಗುತ್ತದೆ.
ಸಭೆಯಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾದ (ಡಿಜಿಎಂ) ಮುನಿಯಪ್ಪ, ಸ್ವಚ್ಛ ಇಕೋ ಸೊಲ್ಯೂಷನ್ಸ್ ಎಂಡಿ ವಿಕ್ಟೋರಿಯಾ, ಎಂಎಸ್‌ಜಿಪಿ ಸಂಸ್ಥೆಯ ಮಾನಸ್, ಹಾಗೂ ಇತರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.





















