ಬೆಂಗಳೂರು, ಜು.11 www.bengaluruwire.com: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗಸಂಸ್ಥೆಯಾದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (BUWJ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಪತ್ರಿಕಾ ದಿನಾಚರಣೆ-2026’ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭವು ಜುಲೈ 11ರಂದು ಬೆಂಗಳೂರಿನ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಯಶಸ್ವಿಯಾಗಿ ನೆರವೇರಿತು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಿ:
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, “ಪತ್ರಿಕೆಗಳು ದಿನಂಪ್ರತಿ ಮನೆ-ಮನಗಳನ್ನು ತಲುಪಿಸುವ ಅತ್ಯುತ್ತಮ ಕಾರ್ಯವನ್ನು ಮಾಡುತ್ತಾ ಬಂದಿವೆ. ದುರ್ಯೋಧನನ ಅಂತ್ಯದ ಕಾಲ ಸೇರಿದಂತೆ, ಮಹಾಭಾರತದ ಕಾಲದಲ್ಲಿಯೂ ‘ವಾರ್ತಾಕಾರರು’ ಎಂಬ ವ್ಯವಸ್ಥೆ ಬಳಕೆಯಲ್ಲಿತ್ತು. ಅವರ ಮೂಲಕವೇ ಸುದ್ದಿಯನ್ನು ಮುಟ್ಟಿಸಲಾಗುತ್ತಿತ್ತು. ಇಂದು ಆಧುನಿಕ ತಂತ್ರಜ್ಞಾನ ಮತ್ತು ಎಐ (AI) ನಂತಹ ಯುಗದಲ್ಲಿ ಪತ್ರಕರ್ತರು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ತಮ್ಮನ್ನು ತಾವು ತೊಡಗಿಸಿಕೊಂಡು, ನೂತನ ತಂತ್ರಜ್ಞಾನದ ಜೊತೆಯಲ್ಲಿ ಸಾಗಿದರೆ ಮಾತ್ರ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ,” ಎಂದು ಕಿವಿಮಾತು ಹೇಳಿದರು.

ಡಿ.ವಿ. ಗುಂಡಪ್ಪನವರನ್ನು ಸ್ಮರಿಸಿದ ಶ್ರೀಗಳು, “ಡಿ.ವಿ.ಜಿ ಅವರು ಮುಕ್ತಿಯನ್ನು ಪಡೆಯಲು ಇರುವ ದಾರಿಗಳನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ‘ಮಂಕುತಿಮ್ಮನ ಕಗ್ಗ’ದ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದರು. ಅವರು ಪ್ರಾರಂಭಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಆದಿಚುಂಚನಗಿರಿ ಮಠವು ಪತ್ರಿಕೆ ಮತ್ತು ಪತ್ರಕರ್ತರನ್ನು ಸದಾ ಗೌರವಿಸುತ್ತದೆ,” ಎಂದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ:
ಇದೇ ಸಮಾರಂಭದಲ್ಲಿ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಕೆ.ಎಸ್. ನಾಗೇಶ್ ಕುಮಾರ್, ಪ್ರಭುದೇವ ಶಾಸ್ತ್ರಿಮಠ, ರಂಗನಾಥ ಭಾರದ್ವಾಜ್, ಕೆ.ಟಿ. ಪ್ರಸಾದ್, ಮಧು ಎಂ. ಉತ್ತವಳ್ಳಿ, ಸಂಗಮದೇವ್, ಎಚ್.ಸಿ. ಶೋಭಾ, ಬಿ.ಎಸ್. ಮಹೇಂದ್ರ, ವೀರಣ್ಣಗೌಡ ಮತ್ತು ಜಿ.ವಿ. ರಾಮರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸೋಮಶೇಖರ ಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಆರ್. ರವೀಶ್ ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.






















