ಬೆಂಗಳೂರು, ಜು.08 www.bengaluruwire.com: ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಾಗಿ ಹಿರಿಯ ಪತ್ರಕರ್ತರಾದ ಪಿ. ತ್ಯಾಗರಾಜ್, ಆರ್. ಜಯಪ್ರಕಾಶ್ ಹಾಗೂ ರಾಘವೇಂದ್ರ ಭಟ್ ಅವರನ್ನು ನೇಮಕ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನೂತನವಾಗಿ ನೇಮಕಗೊಂಡಿರುವ ಮೂವರಿಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.
ಜುಲೈ 08ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಪಿ. ತ್ಯಾಗರಾಜ್ ಅವರನ್ನು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ-1, ಆರ್. ಜಯಪ್ರಕಾಶ್ ಅವರನ್ನು ಮಾಧ್ಯಮ ಕಾರ್ಯದರ್ಶಿ-2 ಹಾಗೂ ರಾಘವೇಂದ್ರ ಭಟ್ ಅವರನ್ನು ಮಾಧ್ಯಮ ಕಾರ್ಯದರ್ಶಿ-3 ಆಗಿ ನೇಮಿಸಿ ಆದೇಶಿಸಲಾಗಿದೆ.
ಕೆಯುಡಬ್ಲ್ಯೂಜೆ ಶ್ಲಾಘನೆ ಮತ್ತು ವಿಶ್ವಾಸ:
ನೂತನ ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಮೂವರಿಗೂ ಶುಭಕೋರಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, “ಇವರ ಅವಧಿಯಲ್ಲಿ ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳು ಜಾರಿಯಾಗಲಿ ಹಾಗೂ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿ” ಎಂದು ಆಶಿಸಿದ್ದಾರೆ.

”ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೂವರು ಮಾಧ್ಯಮ ಕಾರ್ಯದರ್ಶಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಪತ್ರಕರ್ತರ ಹಿತಾಸಕ್ತಿಗೆ ಸಹಕಾರಿಯಾಗುವ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ” ಎಂಬ ವಿಶ್ವಾಸವನ್ನು ಅವರು ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.





















