ಬೆಂಗಳೂರು, ಜು.03 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುವ ಭೀತಿ ಎದುರಾಗಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಮೂಲ್ಯವಾದ ಕಾವೇರಿ ನೀರು ರಸ್ತೆಯಲ್ಲಿ ಪೋಲಾಗುತ್ತಿದೆ.
ಮೂಡಲಪಾಳ್ಯ ವೃತ್ತದಿಂದ ಕೂಗಳತೆ ದೂರದಲ್ಲಿರುವ ನಾಗರಬಾವಿ ಮುಖ್ಯರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಹಾಳಾಗಿ ಬರೋಬ್ಬರಿ 6 ತಿಂಗಳು ಕಳೆದಿದೆ. ಆದರೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾತ್ರ ಕಣ್ಮುಚ್ಚಿ ಕುಳಿತಿದೆ.
ಗುತ್ತಿಗೆದಾರನ ಬೇಜವಾಬ್ದಾರಿತನ, ಇಂಜಿನಿಯರ್ಗಳ ಕುರುಡುತನ:
ಕೆಲವು ದಿನಗಳ ಹಿಂದಷ್ಟೇ ಪೈಪ್ ಹಾಳಾದ ಜಾಗದ ಮೇಲೆಯೇ ರಸ್ತೆ ಕೊರೆದು ಹೊಸದೊಂದು ಪೈಪ್ ಅಳವಡಿಕೆ ಮಾಡಲಾಗಿದೆ. ಆದರೆ, ಈ ವೇಳೆ ಮೊದಲೇ ಒಡೆದು ಹೋಗಿದ್ದ ನೀರಿನ ಪೈಪ್ ಸರಿಪಡಿಸುವ ಕನಿಷ್ಠ ಜವಾಬ್ದಾರಿಯನ್ನೂ ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ತೋರಿಲ್ಲ. ಒಡೆದ ಪೈಪ್ ಅನ್ನು ಹಾಗೆಯೇ ಬಿಟ್ಟು, ಅದರ ಮೇಲೆಯೇ ಹೊಸ ಪೈಪ್ ಅಳವಡಿಸಿ, ಗುಂಡಿ ಮುಚ್ಚಿ, ಜಲ್ಲಿ ಹಾಕಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡು ಹೋಗಿದ್ದಾನೆ.

ಹೊಸ ಪೈಪ್ ಅಳವಡಿಸುವಾಗ ಜಲಮಂಡಳಿಯ ಪ್ರಕಾಂಡ ಎಂಜಿನಿಯರ್ಗಳು ಸ್ಥಳದಲ್ಲೇ ಇದ್ದು ಕಾಮಗಾರಿಯನ್ನು ಪರಿಶೀಲಿಸಿದ್ದರೆ, ಒಡೆದ ಪೈಪ್ ಅನ್ನು ಸರಿಪಡಿಸುತ್ತಿದ್ದರೋ ಏನೋ. ಅಥವಾ ವಿಷಯ ತಿಳಿದಿದ್ದರೂ ಅದರ ಮೇಲೆ ಹೊಸ ಪೈಪ್ ಅಳವಡಿಸಿ ಕಣ್ಣೊರೆಸುವ ತಂತ್ರ ಮಾಡಿದ್ದಾರಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ದೂರು ನೀಡಿದರೂ ಕ್ಯಾರೇ ಎನ್ನದ ಜಲಮಂಡಳಿ:
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ನಗರಕ್ಕೆ ನೀರು ಪೂರೈಸುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿರುವ ಬಗ್ಗೆ ಸ್ಥಳೀಯರು ಇದೇ ವರ್ಷದ ಜನವರಿ 8ರಂದೇ ಅಧಿಕಾರಿಗಳಿಗೆ ದೂರು ನೀಡಿದ್ದರು (Complaint number: 269089). ದೂರು ನೀಡಿ ಆರು ತಿಂಗಳು ಕಳೆದರೂ, ಜಲಮಂಡಳಿಯ ಸಂಬಂಧಪಟ್ಟ ಇಂಜಿನಿಯರ್ಗಳು ಇತ್ತ ತಿರುಗಿಯೂ ನೋಡಿಲ್ಲ.
ಅಧಿಕಾರಿಗಳ ಈ ಅಕ್ಷಮ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಹಾಗೂ ಪೈಪ್ ದುರಸ್ತಿ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.





















