ಬೆಂಗಳೂರು, ಜು.03 www.bengaluruwire.com: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ (ಜು.03) ಭರ್ತಿ ಒಂದು ತಿಂಗಳಾಗಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗಿ ಬರದ ಛಾಯೆ ಆವರಿಸಿರುವ ಸವಾಲಿನ ಹೊತ್ತಿನಲ್ಲೇ ಆಡಳಿತದ ಚುಕ್ಕಾಣಿ ಹಿಡಿದ ಅವರು, ಕೇವಲ 30 ದಿನಗಳಲ್ಲಿ ಹಲವು ಪ್ರಮುಖ ಹಾಗೂ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಹಿಡಿದು ಮೂಲಸೌಕರ್ಯ ಅಭಿವೃದ್ಧಿಯವರೆಗೆ ಅವರು ತೆಗೆದುಕೊಂಡಿರುವ ನಿರ್ಣಯಗಳ ವಿಶ್ಲೇಷಣಾತ್ಮಕ ನೋಟ ಇಲ್ಲಿದೆ.
ಜನಪರ ಗ್ಯಾರಂಟಿ ಮತ್ತು ಆಡಳಿತ ಸುಧಾರಣೆ:
ಮುಖ್ಯಮಂತ್ರಿಯಾದ ಬೆನ್ನಲ್ಲೇ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಡಿ.ಕೆ. ಶಿವಕುಮಾರ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಕೇವಲ ಕನ್ನಡಿಗರಿಗೆ ಮಾತ್ರ ಸಿಗಬೇಕು ಹಾಗೂ ಅದರಲ್ಲಿ ಯಾವುದೇ ಸೋರಿಕೆಯಾಗಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.

* ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ.
- ಗ್ಯಾರಂಟಿ ಯೋಜನೆಗಳ ಜಾರಿಗೆ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆ.
* ಸಾರ್ವಜನಿಕರ ಅಹವಾಲು ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಸಚಿವಾಲಯದ ಸ್ಥಾಪನೆ.
- ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ಆಧಾರಿತ ಸಿಬ್ಬಂದಿ ಹಾಜರಾತಿ ಕಡ್ಡಾಯ.
ಬೆಂಗಳೂರು ಅಭಿವೃದ್ಧಿ ಹಾಗೂ ಮೂಲಸೌಕರ್ಯ:
- ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಒತ್ತು ನೀಡಿರುವ ಸಿಎಂ, ರಾಜಧಾನಿಯ ಚಿತ್ರಣ ಬದಲಿಸಲು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
* ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಬರೋಬ್ಬರಿ 2 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆ.
- 2500 ಚದರ ಅಡಿವರೆಗಿನ ನೂತನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಒಸಿ (OC) ವಿನಾಯಿತಿ.
- ರಾಜ್ಯದೆಲ್ಲೆಡೆ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆಗೆ ಹಸಿರು ನಿಶಾನೆ.
* ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ಎಸ್.ಎಂ. ಕೃಷ್ಣ ರಸ್ತೆ ಉದ್ಘಾಟನೆ ಹಾಗೂ ಹೆಬ್ಬಾಳ ಬಳಿ ಸುರಂಗ ರಸ್ತೆಗೆ ಶಂಕುಸ್ಥಾಪನೆ.
ಉದ್ಯೋಗ, ಯುವಜನತೆ ಮತ್ತು ರೈತಪರ ಕಾಳಜಿ:
- ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಯುವಕರ ಸಬಲೀಕರಣದ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಜೊತೆಗೆ ರೈತರ ಸಮಸ್ಯೆಗಳಿಗೂ ಸ್ಪಂದಿಸಿದೆ.
* ಕೇವಲ 6 ತಿಂಗಳ ಗಡುವಿನಲ್ಲಿ 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆದೇಶ.
* ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸಲು ಪ್ರತ್ಯೇಕ ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆ.
* ಎಲ್ಲಾ ಪಂಚಾಯಿತಿ, ವಾರ್ಡ್ಗಳಲ್ಲಿ ‘ಭಾರತ ಜೋಡೋ ಯುವಕರ ಸಂಘ’ ಸ್ಥಾಪನೆ ಮತ್ತು ತಲಾ 10 ಲಕ್ಷ ರೂ. ಅನುದಾನ.
* ಹಾಸನದ ಐಐಟಿಗೆ ಭೂಮಿ ಕಳೆದುಕೊಂಡ ರೈತರಿಗೆ 2013ರ ಕೋರ್ಟ್ ಆದೇಶದನ್ವಯ ಪರಿಹಾರ ಒದಗಿಸುವ ಭರವಸೆ ಹಾಗೂ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ಕಟ್ಟುನಿಟ್ಟಿನ ನಿರ್ದೇಶನ.
ಕೇಂದ್ರದೊಂದಿಗಿನ ಸಮನ್ವಯ ಹಾಗೂ ಭವಿಷ್ಯದ ಯೋಜನೆಗಳು:
ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಸಿಎಂ ಸ್ಪಷ್ಟಪಡಿಸಿದ್ದಾರೆ. ದೆಹಲಿ ಮಟ್ಟದಲ್ಲಿ ರಾಜ್ಯದ ಧ್ವನಿಯನ್ನು ಬಲಪಡಿಸಲು ಮುಂದಾಗಿದ್ದಾರೆ.
- ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ನೀರಾವರಿ, ಮೆಟ್ರೋ, ಹಾಗೂ ವಿಶೇಷ ಅನುದಾನಗಳ ಕುರಿತು ಯಶಸ್ವಿ ಚರ್ಚೆ.
- ದೆಹಲಿಯಲ್ಲಿ ರಾಜ್ಯದ ಹಿತ ಕಾಯಲು ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳ ವಿಶೇಷ ತಂಡ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ವಕೀಲರ ತಂಡದ ಬಲವರ್ಧನೆ.
- ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ವೇಗ; ಮಣ್ಣು ಪರೀಕ್ಷೆ ಮತ್ತು ಸಮೀಕ್ಷೆಗೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ.
- 2028ರ ವೇಳೆಗೆ ‘ನಶೆ ಮುಕ್ತ ಕರ್ನಾಟಕ’ ನಿರ್ಮಾಣದ ಗುರಿ, ಡ್ರಗ್ಸ್ ಜಾಲದ ಸುಳಿವು ನೀಡಿದವರಿಗೆ ಬಹುಮಾನ ಹಾಗೂ ಗುಟ್ಕಾ ನಿಷೇಧದ ಎಚ್ಚರಿಕೆ.
ಒಟ್ಟಾರೆಯಾಗಿ ಮೊದಲ 30 ದಿನಗಳ ಆಡಳಿತವನ್ನು ಗಮನಿಸಿದರೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪ್ರಿಯ ಯೋಜನೆಗಳ ಜೊತೆಗೆ ದೀರ್ಘಕಾಲೀನ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರ ನಿಯಂತ್ರಣ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅವರು ನೀಡಿರುವ ಒತ್ತು ಮುಂದಿನ ದಿನಗಳಲ್ಲಿ ರಾಜ್ಯದ ಗತಿ ಬದಲಿಸುವ ಮುನ್ಸೂಚನೆ ನೀಡಿದೆ. ಬರಗಾಲದ ಸವಾಲನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕಿದೆ.






















