ಮುಂಬೈ, ಅ.10 www.bengaluruwire.com : ಟಾಟಾ ಗ್ರೂಪ್ (TATA Group)ಅನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಜಾಗತಿಕ ಮಟ್ಟದಲ್ಲಿ ಭಾರತದ ಕೈಗಾರಿಕೆಗಳಿಗೆ ಮನ್ನಣೆ ತಂದ ದೇಶದ ಹೆಮ್ಮೆಯ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಬುಧವಾರ ರಾತ್ರಿ ಅಸ್ತಂಗತರಾದರು.
ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಹೆಸರಾಂತ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗಿದ್ದು, ಅವರು 86 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಕಂಪನಿಯು ಬುಧವಾರ ತಡರಾತ್ರಿ ತಿಳಿಸಿದೆ.
ರತನ್ ಟಾಟಾ ಅವರು ಬುಧವಾರ ಮುಂಬೈನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು, ಚಿಕಿತ್ಸೆ ಫಲಕಾತಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟಾಟಾಗ್ರೂಪ್, “ನಿಜವಾದ ಅಸಾಧಾರಣ ನಾಯಕರಾದ ಶ್ರೀ ರತನ್ ನೇವೆಲ್ ಟಾಟಾ ಅವರಿಗೆ ನಾವು ವಿದಾಯ ಹೇಳುತ್ತೇವೆ” ಎಂದು ಪೋಸ್ಟ್ ಮಾಡಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಬುಧವಾರ ತಡರಾತ್ರಿ ಕೈಗಾರಿಕೋದ್ಯಮಿಯು ನಿಧನರಾಗಿದ್ದನ್ನು ದೃಢಪಡಿಸಿದ್ದಾರೆ. ಈ ಸಂದರ್ಭದಲ್ಲಿ ಟಾಟಾ “ಸ್ನೇಹಿತ, ಮಾರ್ಗದರ್ಶಕ ಮತ್ತು ಮಾರ್ಗದರ್ಶಿ” ಆಗಿದ್ದರು ಎಂದು ಸ್ಮರಿಸಿದ್ದಾರೆ.

“ಅತೀವ ನಷ್ಟ ಹಾಗೂ ಮನದಾಳದ ಭಾವನೆಯೊಂದಿಗೆ ನಾವು ರತನ್ ನೇವಲ್ ಟಾಟಾ ಅವರಿಗೆ ವಿದಾಯ ಹೇಳುತ್ತೇವೆ. ಅವರ ಅಗಾಧ ಕೊಡುಗೆಗಳು ಟಾಟಾ ಸಮೂಹವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ರಚನೆಯನ್ನು ರೂಪಿಸಿವೆ” ಎಂದು ಟಾಟಾ ಸನ್ಸ್ ಅಧ್ಯಕ್ಷರು ಹೇಳಿದ್ದಾರೆ.

ಪ್ರಧಾನಿ ಮೋದಿಯಿಂದ ಶೃದ್ಧಾಂಜಲಿ ಸಲ್ಲಿಕೆ :
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ರತನ್ ಟಾಟಾ ಅವರೊಗೆ ತಮ್ಮ ಟ್ವೀಟ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟಾಟಾ ಅವರನ್ನು “ದೃಷ್ಟಿವಂತ” ಎಂದು ಬಣ್ಣಿಸಿದ್ದಾರೆ. ಅಲ್ಲದೆ ತಮ್ಮ ಪೋಸ್ಟ್ ನಲ್ಲಿ ಪ್ರಧಾನಿ, “ನಾನು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಗುಜರಾತ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದೆ. ನಾವು ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅವರ ದೃಷ್ಟಿಕೋನಗಳನ್ನು ನಾನು ಬಹಳ ಪುಷ್ಟೀಕರಿಸಿದ್ದೇನೆ. ನಾನು ದೆಹಲಿಗೆ ಬಂದಾಗ ಈ ಸಂವಾದಗಳು ಮುಂದುವರೆಯುತ್ತಿದ್ದವು. ನನಗೆ ವೈಯುಕ್ತಿಕವಾಗಿ ತೀವ್ರ ನೋವಾಗಿದೆ. ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಆ ದೇವರು ನೀಡುವಂತಾಗಲಿ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ರತನ್ ಟಾಟಾ ಅವರು ಕೇವಲ ಉದ್ಯಮಿ ಮಾತ್ರ ಆಗಿರಲಿಲ್ಲ, ಬದಲಿಗೆ ವ್ಯಾಪಾರದೊಂದಿಗೆ ಸಾಮಾಜಿಕ ಜವಾಬ್ದಾರಿಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ ಭಾರತೀಯ ಉದ್ಯಮದ ಆಧಾರಸ್ತಂಭವಾಗಿದ್ದರು.
1937ರಲ್ಲಿ ಮುಂಬೈನಲ್ಲಿ ಜನನ :

ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಮುಂಬೈನಲ್ಲಿ ಜನಿಸಿದರು. ಅವರು ಟಾಟಾ ಗ್ರೂಪ್ ಪರಂಪರೆಯ ಭಾಗವಾದ ವಿಶೇಷ ಕೈಗಾರಿಕೋದ್ಯಮಿ ಕುಟುಂಬದಲ್ಲಿ ಬೆಳೆದರು. ರತನ್ ಟಾಟಾ ಅವರು ಟಾಟಾ ಗ್ರೂಪ್ ಸಂಸ್ಥಾಪಕ ಜಮ್ಸೆಟ್ಜಿ ಟಾಟಾ ಅವರ ಕುಟುಂಬದಿಂದ ಬಂದವರು, ಅವರು ಭಾರತೀಯ ಉದ್ಯಮದಲ್ಲಿ ಟಾಟಾ ಬ್ರಾಂಡ್ನ ಅಡಿಪಾಯವನ್ನು ಹಾಕಿದರು. ಅವರ ತಾಯಿಯ ಹೆಸರು ಸುನು ಟಾಟಾ, ಮತ್ತು ಅವರು ನೌಶರ್ವಾಂಜಿ ಟಾಟಾ ಅವರ ಮಗ. ರತನ್ ಟಾಟಾ ಅವರ ಪೋಷಕರು ಅವರು 10 ವರ್ಷದವರಾಗಿದ್ದಾಗ ವಿಚ್ಛೇದನ ಪಡೆದರು. ಇದಾದ ಬಳಿಕ ಅವರನ್ನು ಅವರ ಅಜ್ಜಿ ನವಾಜ್ಬಾಯಿ ಟಾಟಾ ಸಾಕಿ ಸಲುಹಿದರು.
ರತನ್ ಟಾಟಾ ತಮ್ಮ ಆರಂಭಿಕ ಶಿಕ್ಷಣವನ್ನು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ತರುವಾಯ, ಅವರು ಅಮೆರಿಕಕ್ಕೆ ತೆರಳಿದರು, ಅಲ್ಲಿ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1962ರಲ್ಲಿ ವೃತ್ತಿ ಜೀವನ ಆರಂಭ :
ರತನ್ ಟಾಟಾ ಅವರು 1962 ರಲ್ಲಿ ಟಾಟಾ ಗ್ರೂಪ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಅವರು ಟಾಟಾ ಸ್ಟೀಲ್‌ನ ಜೆಮ್‌ಶೆಡ್‌ಪುರ ಸ್ಥಾವರದಲ್ಲಿ ಕೆಲಸಗಾರರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮತ್ತು ಕಾರ್ಮಿಕರೊಂದಿಗೆ ಸಂವಹನದ ಕಲೆಯ ಬಗ್ಗೆ ಕಲಿತರು.
1991ರಲ್ಲಿ ಟಾಟಾ ಗ್ರೂಪ್ ಆಡಳಿತ ಕೈಗೆತ್ತಿಕೊಂಡರು :
1991 ರಲ್ಲಿ, ಜೆಆರ್‌ಡಿ ಟಾಟಾ ನಿವೃತ್ತರಾದ ಬಳಿಕ, ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಆಡಳಿತ ಕೈಗೆತ್ತಿಕೊಂಡರು. ಆ ಸಮಯದಲ್ಲಿ, ಟಾಟಾ ಗ್ರೂಪ್ ಕೆಲವು ಸಾಂಪ್ರದಾಯಿಕ ಮತ್ತು ಸುರಕ್ಷಿತ ವ್ಯವಹಾರಗಳ ಮೇಲೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿತ್ತು. ಆದರೆ ರತನ್ ಟಾಟಾ ಅವರ ಆಲೋಚನೆ ಬಹಳ ವಿಭಿನ್ನವಾಗಿತ್ತು. ಅವರು ತಮ್ಮ ಉದ್ಯಮ ಸಮೂಹವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್ ಅನೇಕ ಆವಿಷ್ಕಾರಗಳನ್ನು ಮಾಡಿತು ಮತ್ತು ಹೊಸ ಕ್ಷೇತ್ರಗಳಿಗೆ ಉದ್ಯಮ ತೆರೆದುಕೊಂಡು ವಿಸ್ತರಣೆಯಾಯಿತು. ಒಟ್ಟಾರೆ ದೇಶಾದ್ಯಂತ ಕೋಟ್ಯಾಂತರ ಯುವ ಮನಸ್ಸುಗಳಿಗೆ ಕೇವಲ ಉದ್ಯಮ ಮತ್ತು ವ್ಯಾಪಾರಕ್ಕೆ ಸೀಮಿತವಾಗದೆ ಸಮಾಜವನ್ನು ಸುಧಾರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಸ್ಪೂರ್ತಿ ಸೆಲೆಯಾಗಿದ್ದರು.
ಅವರ ಬದುಕು ಮುಂದಿನ ಜನಾಂಗಕ್ಕೆ ಮಾದರಿಯಾಗುವಂತೆ ಜೀವನ ನಡೆಸಿ ಮತ್ತೆ ಬಾರದ ಲೋಕದತ್ತ ನೆಡೆದಿದ್ದಾರೆ.
ಮಾನವೀಯತೆ ಹಾಗೂ ಪ್ರಾಣಿ ಪ್ರೀತಿಯ ಬಗ್ಗೆ ರತನ್ ಟಾಟಾ ಅವರು ಪೋಸ್ಟ್ ಮಾಡಿದ ಈ ಕೆಳಕಂಡ, ಇದೊಂದು ಸಂದೇಶ ಸಾಕು ಎಲ್ಲವನ್ನು ಮನದಟ್ಟು ಮಾಡಲು :




















