ನವದೆಹಲಿ, ಅ.10 www.bengaluruwire.com: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಅವರ ಜತೆಗಿದ್ದ ಮುಖಂಡರನ್ನು ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ವಿಮಾನದೊಳಗೆ ಪ್ರವೇಶಿಸಿ ಪೊಲೀಸರು ವಶಕ್ಕೆ ಪಡೆದಿರುವುದು ಭಾರೀ ಸಂಚಲನ ಮೂಡಿಸಿದೆ.
ವಿಮಾನದೊಳಗೆ ನಡೆದಿದ್ದೇನು?:

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಒಳನುಗ್ಗಿದ ದೆಹಲಿ ಪೊಲೀಸರು, ಪ್ರತಿಭಟನೆಗೆ ಕಾನೂನುಬದ್ಧ ಅನುಮತಿ ಇಲ್ಲ ಎಂದು ತಿಳಿಸಿ ಮುಖಂಡರನ್ನು ವಶಕ್ಕೆ ಪಡೆದರು. ಈ ಕುರಿತು ವಿಮಾನದ ಒಳಗಿಂದಲೇ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅಭಿಜಿತ್ ದೀಪ್ಕೆ, “ನಾವು ವಿಮಾನದಿಂದ ಇಳಿಯುವ ಮೊದಲೇ ಪೊಲೀಸರು ಒಳಗೆ ಬಂದು ನಮ್ಮನ್ನು ಬಂಧಿಸಲು ಮುಂದಾಗಿದ್ದಾರೆ.

ಶಾಂತಿಯುತ ಪ್ರತಿಭಟನೆಗೆ ನಾವು ಮುಂದಾಗಿದ್ದೆವು, ಆದರೆ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣ ಸರ್ವಾಧಿಕಾರ” ಎಂದು ಆಕ್ರೋಶ ಹೊರಹಾಕಿದ್ದಾರೆ. ತುರ್ತು ಪರಿಸ್ಥಿತಿಯಲ್ಲೂ ಇಂತಹ ಘಟನೆ ನಡೆದಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮುಖಂಡರು, ಕಾರ್ಯಕರ್ತರ ಸರಣಿ ಬಂಧನ:
ಇತ್ತ ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ, ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನೂ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಿಜೆಪಿ ತಿಳಿಸಿದ್ದು, ಇದನ್ನು ಕೇಂದ್ರ ಸರ್ಕಾರದ ದಬ್ಬಾಳಿಕೆಯ ಕ್ರಮ ಎಂದು ತೀವ್ರವಾಗಿ ಖಂಡಿಸಿದೆ.
ದೆಹಲಿಯಲ್ಲಿ ಅಭೂತಪೂರ್ವ ಬಿಗಿ ಬಂದೋಬಸ್ತ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ವಿರೋಧಿಸಿ ಜಂತರ್ ಮಂತರ್‌ನಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ದೆಹಲಿ ಪೊಲೀಸರು ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತೆ ಕೈಗೊಂಡಿದ್ದಾರೆ.
ಜಂತರ್ ಮಂತರ್ ಮತ್ತು ಸಂಸದ್ ಮಾರ್ಗ ಸಂಪರ್ಕಿಸುವ ರಸ್ತೆಗಳಲ್ಲಿ 7 ಹಂತಗಳ ಬ್ಯಾರಿಕೇಡ್‌ಗಳು ಮತ್ತು ರಸ್ತೆಯಲ್ಲಿ ಮೊಳೆಗಳ ಪಟ್ಟಿಗಳನ್ನು (Spike strips) ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದ ನೂರಾರು ಜನರನ್ನು ವಶಕ್ಕೆ ಪಡೆಯಲಾಗಿದೆ. ಭದ್ರತಾ ಹಿತದೃಷ್ಟಿಯಿಂದ ದೆಹಲಿಯ ಸುಮಾರು 46 ಮೆಟ್ರೋ ನಿಲ್ದಾಣಗಳ ಪ್ರವೇಶ ನಿರ್ಬಂಧಿಸಲಾಗಿದೆ. ನಗರದಾದ್ಯಂತ ಬಿಗಿ ಪೊಲೀಸ್ ಕಾವಲು ಮುಂದುವರಿದಿದ್ದು, ಯಾವುದೇ ಪ್ರತಿಭಟನೆಗೆ ಅವಕಾಶ ನೀಡದಿರಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.


















