ಮೈಸೂರು, ಅ.11 www.bengaluruwire.com: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದ ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ದೊರೆತಿದೆ.
ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಈ ಬಾರಿಯ ದಸರಾ ವೈಭವಕ್ಕೆ ಬೆಳಿಗ್ಗೆ 11:50 ರಿಂದ 12:13 ರೊಳಗಿನ ಶುಭ ಧನುರ್ ಲಗ್ನದಲ್ಲಿ ವಿದ್ಯುಕ್ತ ಚಾಲನೆ ನೀಡಿದರು.
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಶ್ರೀಗಳು ಹಾಗೂ ಡಿಕೆಶಿ ದಂಪತಿ:

ದಸರಾ ಮಹೋತ್ಸವದ ವೇದಿಕೆ ಕಾರ್ಯಕ್ರಮ ಹಾಗೂ ಅಧಿಕೃತ ಉದ್ಘಾಟನೆಗೂ ಮುನ್ನ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಧರ್ಮಪತ್ನಿ ಉಷಾ ಅವರೊಂದಿಗೆ ದೇವಾಲಯಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಆಶೀರ್ವಾದ ಪಡೆದರು. ಅರ್ಚಕರು ಗಣ್ಯರಿಗೆ ಸಾಂಪ್ರದಾಯಿಕವಾಗಿ ಶಾಲು ಹೊದಿಸಿ, ಪ್ರಸಾದ ವಿನಿಯೋಗಿಸಿ ಗೌರವಿಸಿದರು.

ಸಾಂಸ್ಕೃತಿಕ ನಗರಿಗೆ ಕಳೆಗಟ್ಟಿದ ದಸರಾ ಕಳೆ:
ಬೆಟ್ಟದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಮಂಗಳವಾದ್ಯಗಳು, ವೇದಘೋಷಗಳು ಹಾಗೂ ಸಾಂಸ್ಕೃತಿಕ ಕಲಾತಂಡಗಳ ಮೆರುಗು ಮುಗಿಲು ಮುಟ್ಟಿತು. ಇಂದಿನಿಂದ ಮುಂದಿನ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಸ್ಕೃತಿಕ ವೈಭವ, ದೀಪಾಲಂಕಾರ ಹಾಗೂ ಜಂಬೂಸವಾರಿಯ ಸಡಗರ ಕಳೆಗಟ್ಟಲಿದೆ. ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸಂಭ್ರಮಿಸಿದರು.



















