ನವದೆಹಲಿ, ನ.26 www.bengaluruwire.com: ಆಧುನಿಕ ಯುದ್ಧಭೂಮಿಯಲ್ಲಿ ಶತ್ರು ರಾಷ್ಟ್ರಗಳ ಡ್ರೋನ್ ಹಾಗೂ ಡ್ರೋನ್ ಸಮೂಹಗಳ (Drone Swarms) ದಾಳಿಯನ್ನು ಕ್ಷಣಾರ್ಧದಲ್ಲಿ ಹಿಮ್ಮೆಟ್ಟಿಸಲು ಭಾರತ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.
ದೇಶದ ಮೊದಲ ಸ್ವದೇಶಿ ನಿರ್ಮಿತ ಎರಡು-ಹಂತದ (Two-layer), ವಾಹನದ ಮೇಲೆ ಅಳವಡಿಸಬಹುದಾದ ಕೌಂಟರ್-ಸ್ವಾಮ್ ಡ್ರೋನ್ ವ್ಯವಸ್ಥೆಯಾದ ‘ಭಾರ್ಗವಾಸ್ತ್ರ’ (Bhargavastra) ತನ್ನ ಅಭಿವೃದ್ಧಿ ಪರೀಕ್ಷೆಗಳನ್ನು ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ನವೆಂಬರ್ 20 ರಿಂದ 24 ರವರೆಗೆ ನಡೆದ ಈ ಪರೀಕ್ಷೆಗಳನ್ನು ನಾಗ್ಪುರ ಮೂಲದ ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ (SDAL) ಸಂಸ್ಥೆ ಯಶಸ್ವಿಯಾಗಿ ನಡೆಸಿದೆ. ರಕ್ಷಣಾ ಸಚಿವಾಲಯದ ‘ಮೇಕ್-2’ (Make-II) ಯೋಜನೆಯಡಿ ಭಾರತೀಯ ಸೇನೆಯ ಅಗತ್ಯಗಳಿಗೆ ತಕ್ಕಂತೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಏನಿದು ‘ಭಾರ್ಗವಾಸ್ತ್ರ’ದ ವಿಶೇಷತೆ?:

ಆಧುನಿಕ ಯುದ್ಧ ತಂತ್ರಗಳಲ್ಲಿ ಏಕಕಾಲಕ್ಕೆ ನೂರಾರು ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸುವ ‘ಡ್ರೋನ್ ಸ್ವಾಮ್’ ತಂತ್ರಜ್ಞಾನ ದೊಡ್ಡ ಸವಾಲಾಗಿದೆ. ದುಬಾರಿ ವಾಯು ರಕ್ಷಣಾ ಕ್ಷಿಪಣಿಗಳ ಬದಲಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಇಂತಹ ಡ್ರೋನ್ ಹಿಂಡನ್ನು ಆಕಾಶದಲ್ಲೇ ಧ್ವಂಸಗೊಳಿಸಲು ಭಾರ್ಗವಾಸ್ತ್ರವನ್ನು ರೂಪಿಸಲಾಗಿದೆ.
ಎರಡು-ಹಂತದ ದಾಳಿ ಸಾಮರ್ಥ್ಯ: ಇದರ ಮೊದಲ ಹಂತದಲ್ಲಿ 64-ಟ್ಯೂಬ್ ರಾಕೆಟ್ ಲಾಂಚರ್‌ಗಳಿದ್ದು, ಸುಮಾರು 2.5 ಕಿಲೋಮೀಟರ್ ದೂರದವರೆಗಿನ ಶತ್ರು ಡ್ರೋನ್ ಸಮೂಹಗಳನ್ನು ನಿಖರವಾಗಿ ಹೊಡೆದುರುಳಿಸುತ್ತವೆ. ಎರಡನೇ ಹಂತದಲ್ಲಿ ಮಾರ್ಗದರ್ಶಿತ ಮೈಕ್ರೋ-ಕ್ಷಿಪಣಿಗಳಿದ್ದು (Guided Micro-missiles), ಸಂಕೀರ್ಣ ಹಾಗೂ ಅಪಾಯಕಾರಿ ಡ್ರೋನ್‌ಗಳನ್ನು ಬೆನ್ನಟ್ಟಿ ನಾಶಪಡಿಸುತ್ತವೆ.
ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆ: ಭಾರ್ಗವಾಸ್ತ್ರವು ರೇಡಾರ್, ಆರ್‌ಎಫ್ ಡಿಟೆಕ್ಟರ್ ಹಾಗೂ ಹಗಲು-ರಾತ್ರಿ ಕಾರ್ಯನಿರ್ವಹಿಸುವ ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್‌ಗಳನ್ನು ಹೊಂದಿದೆ. AI-ಆಧಾರಿತ ಕಮಾಂಡ್ ಮತ್ತು ಕಂಟ್ರೋಲ್ (C4I) ವ್ಯವಸ್ಥೆಯ ಮೂಲಕ ಕೇವಲ 16 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿಯನ್ನು ಪತ್ತೆಹಚ್ಚಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
ಎಲ್ಲಾ ಭೂಪ್ರದೇಶಕ್ಕೂ ಸೈ: ಮರುಭೂಮಿ, ಬಯಲು ಪ್ರದೇಶ ಮಾತ್ರವಲ್ಲದೆ ಸಮುದ್ರ ಮಟ್ಟದಿಂದ 5,000 ಮೀಟರ್ ಎತ್ತರದ ಹಿಮಾಲಯದಂತಹ ದುರ್ಗಮ ಗಡಿ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಪೋಖ್ರಾನ್ ಪರೀಕ್ಷೆಯ ಯಶಸ್ಸಿನೊಂದಿಗೆ, ಭಾರ್ಗವಾಸ್ತ್ರ ವ್ಯವಸ್ಥೆಯು ಸೇನೆಯ ಅಂತಿಮ ಪ್ರೊಟೊಟೈಪ್ ಪ್ರದರ್ಶನಕ್ಕೆ ಸಜ್ಜಾಗಿದೆ. ಇದು ಭಾರತೀಯ ಸೇನೆಯ ವಾಯು ರಕ್ಷಣಾ ಬಲವನ್ನು ಮತ್ತಷ್ಟು ಸದೃಢಗೊಳಿಸಲಿದೆ.

















