ಬೆಂಗಳೂರು, ಅ.12 www.bengaluruwire.com: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ರೋಗಿಗಳ ಕುಟುಂಬಸ್ಥರಿಂದ ಬಲವಂತವಾಗಿ ಬಾಕಿ ಹಣ ವಸೂಲಿ ಮಾಡುವ ಹಾಗೂ ಹಣ ಪಾವತಿಸದ ಕಾರಣಕ್ಕೆ ಮೃತದೇಹಗಳನ್ನು ನೀಡದೆ ತಡೆಹಿಡಿಯುವ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಬಾಕಿ ಬಿಲ್ ಕಾರಣಕ್ಕೆ ಶವ ತಡೆಹಿಡಿಯುವಂತಿಲ್ಲ: ಸದ್ಯ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ಖಾಸಗಿ ಆಸ್ಪತ್ರೆಗಳು ಮೃತ ರೋಗಿಯ ಶವವನ್ನು ಹಸ್ತಾಂತರಿಸುವ ಮುನ್ನ ಬಿಲ್ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವಂತೆ ಮೃತರ ಕುಟುಂಬದವರ ಮೇಲೆ ಒತ್ತಡ ಹೇರುತ್ತಿವೆ. ಇದರಿಂದಾಗಿ ಆಸ್ಪತ್ರೆಗಳು ನೀಡಿದ ಭಾರೀ ಮೊತ್ತದ ಬಿಲ್ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳು, ಶವವನ್ನು ಪಡೆಯಲಾಗದೆ ಮತ್ತಷ್ಟು ಆಘಾತ ಹಾಗೂ ಮಾನಸಿಕ ವೇದನೆ ಅನುಭವಿಸುತ್ತಿವೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಿಲ್ ಬಾಕಿ ಉಳಿಸಿಕೊಂಡಿದ್ದರೂ ಮೃತದೇಹ ಹಸ್ತಾಂತರಕ್ಕೆ ಯಾವುದೇ ಅಡ್ಡಿಪಡಿಸಬಾರದು ಎಂಬ ಬಗ್ಗೆ ನಿಯಮಾವಳಿ ರೂಪಿಸಲು ಇಲಾಖೆ ಮುಂದಾಗಿದೆ.
ಆರೋಗ್ಯ ಸಚಿವರ ಮಹತ್ವದ ಹೇಳಿಕೆ: ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದರೂ ಮೃತಪಟ್ಟಾಗ ಹಣದ ಕೊರತೆ ಅಥವಾ ಆರ್ಥಿಕ ಸಂಕಷ್ಟದಿಂದ ಬಿಲ್ ಕಟ್ಟಲು ಸಾಧ್ಯವಾಗದಿದ್ದರೆ, ಆಸ್ಪತ್ರೆಯವರು ಮೃತದೇಹವನ್ನು ತಡೆಹಿಡಿಯುವುದು ತಪ್ಪು. ಇದು ದುಃಖದಲ್ಲಿರುವ ಕುಟುಂಬಕ್ಕೆ ಮತ್ತಷ್ಟು ಹೊರೆಯಾಗುತ್ತದೆ. ಆದ್ದರಿಂದ ಮೃತದೇಹವನ್ನು ತಕ್ಷಣವೇ ಹಸ್ತಾಂತರಿಸುವಂತೆ ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನು ತಿದ್ದುಪಡಿ ಹಾಗೂ ಹೊಸ ನಿಯಮ ರೂಪಿಸಲು ಚಿಂತನೆ: ಈ ಸಂಬಂಧ ಖಾಸಗಿ ಆಸ್ಪತ್ರೆಗಳು ಹಾಗೂ ‘ಫಾನಾ’ (PHANA) ಸೇರಿದಂತೆ ವೈದ್ಯಕೀಯ ಸಂಘಟನೆಗಳೊಂದಿಗೆ ಆರೋಗ್ಯ ಇಲಾಖೆಯು ಶೀಘ್ರವೇ ಸಭೆ ನಡೆಸಿ ಚರ್ಚಿಸಲಿದೆ. ಈಗಾಗಲೇ 2007 ಮತ್ತು 2018ರಲ್ಲಿ ಈ ಕುರಿತು ಕಾನೂನು ರೂಪಿಸಲಾಗಿದ್ದರೂ, ಅವು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. 2018ರ ಭದ್ರತಾ ಠೇವಣಿ ಪಡೆದು ಶವ ಬಿಡುಗಡೆ ಮಾಡುವ ನಿಯಮವೂ ಜನಸಾಮಾನ್ಯರಿಗೆ ಹೊರೆಯಾಗಿದೆ.

ಇಂತಹ ಸಂಕಷ್ಟಕ್ಕೆ ಸಿಲುಕಿದ ಬಡವರು ಅಥವಾ ಮಧ್ಯಮ ವರ್ಗದವರು ಹಣ ಹೊಂದಿಸಲು ಸಾಧ್ಯವಾಗದಿದ್ದಲ್ಲಿ ನೆರವಾಗುವ ನಿಟ್ಟಿನಲ್ಲಿ ಮತ್ತು ಆಸ್ಪತ್ರೆಗಳ ಬಾಕಿ ಹಣ ಪಾವತಿಸುವ ವಿಚಾರದಲ್ಲಿ ಸ್ಪಷ್ಟ ಉಲ್ಲೇಖವಿರುವಂತೆ ಕಾನೂನು ತಿದ್ದುಪಡಿ ತರಲು ಅಥವಾ ಹೊಸ ಕಾನೂನು ರೂಪಿಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತಂತೆ ಖಾಸಗೆ ಆಸ್ಪತ್ರೆಗಳು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಸಂಘದ ಜೊತೆಗೆ ಚರ್ಚೆ ನಡೆಸಲಿದೆ.



















