ಬೆಂಗಳೂರು, ಅ.10 www.bengaluruwire.com: ಜನಸಾಮಾನ್ಯನ ಬದುಕಿಗೆ ಗ್ಯಾರಂಟಿಗಳ ನೆಪವೊಡ್ಡಿ ಅಭಿವೃದ್ಧಿ ಕಾಮಗಾರಿಗಳಿಗೆ ನಯಾಪೈಸೆ ಕಾಸಿಲ್ಲವೆನ್ನುವ ಸರ್ಕಾರ, ಜನಪ್ರತಿನಿಧಿಗಳ ಐಷಾರಾಮಿ ಸವಾರಿಗಂತೂ ರಾಜಾತಿಥ್ಯ ನೀಡಲು ಕಿಂಚಿತ್ತೂ ಹಿಂದೇಟು ಹಾಕುತ್ತಿಲ್ಲ.
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದರೆ, ಮತ್ತೊಂದೆಡೆ ರಾಜ್ಯದ ಸಚಿವರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಕಾರು ಖರೀದಿಯ ಗರಿಷ್ಠ ಮಿತಿಯನ್ನು ದಿಢೀರನೆ ₹26 ಲಕ್ಷದಿಂದ ₹31 ಲಕ್ಷಕ್ಕೆ ಏರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊರಡಿಸಿರುವ ಈ ಆದೇಶದ ಪ್ರಕಾರ, ಸಚಿವರು ಮತ್ತು ಸಂಸದರ ನೂತನ ವಾಹನ ಖರೀದಿಗೆ ಜಿಎಸ್‌ಟಿ ಒಳಗೊಂಡಂತೆ ₹31 ಲಕ್ಷದವರೆಗೆ ಸರ್ಕಾರಿ ಖಜಾನೆಯಿಂದಲೇ ಹಣ ವೆಚ್ಚಮಾಡಲು ಅನುಮೋದನೆ ನೀಡಲಾಗಿದೆ. 2022ರಲ್ಲಿ ₹26 ಲಕ್ಷಕ್ಕೇರಿದ್ದ ಈ ಮಿತಿಯನ್ನು ಕೇವಲ ನಾಲ್ಕೇ ವರ್ಷಗಳಲ್ಲಿ ಮತ್ತೆ ₹5 ಲಕ್ಷದಷ್ಟು ಹೆಚ್ಚಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ರಸ್ತೆಗಳಲ್ಲಿ ಗುಂಡಿ, ಸಚಿವರ ಪಯಣಕ್ಕೆ ಮಕ್ಮಲ್: ಮೆತ್ತೆ! ರಾಜ್ಯದ ಪ್ರಮುಖ ರಸ್ತೆಗಳೆಲ್ಲ ಗುಂಡಿಮಯವಾಗಿ ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ. ಸ್ಥಳೀಯ ಮೂಲಸೌಕರ್ಯ, ಸೇತುವೆ, ಆಸ್ಪತ್ರೆ ಹಾಗೂ ಶಾಲಾ ಕಟ್ಟಡಗಳ ದುರಸ್ತಿಗೆ ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ನೂರೆಂಟು ಷರತ್ತುಗಳನ್ನು ವಿಧಿಸುತ್ತದೆ. ಆದರೆ, ಸಚಿವರು-ಸಂಸದರು ಸಂಚರಿಸಲು ₹26 ಲಕ್ಷದ ಗಾಡಿ ಸಾಲುತ್ತಿಲ್ಲವೇ? ಇವರಿಗೆ ಇಂಧನ ಮಿತವ್ಯಯದ ನೆಪದಲ್ಲಿ ವಿನಾಯಿತಿ ನೀಡಿ, ಐಷಾರಾಮಿ ಮಾದರಿಯ ಹೈ-ಎಂಡ್ ಕಾರುಗಳಿಗೆ ತೆರಿಗೆದಾರರ ಹಣವನ್ನು ಸುರಿಯುತ್ತಿರುವುದು ಯಾವ ಸೀಮೆಯ ಜನಪರ ಆಡಳಿತ ಎಂಬುದು ಪ್ರಜ್ಞಾವಂತರ ಚಾಟಿ ಏಟು.

ಆದೇಶದಲ್ಲಿ “ಇಂಧನ ಮಿತವ್ಯಯ ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಹೊಂದಿರುವ ವಾಹನಗಳನ್ನು ಖರೀದಿಸುವುದು” ಎಂಬ ಶಿಷ್ಟಾಚಾರದ ಸಾಲುಗಳನ್ನಂತೂ ಉಲ್ಲೇಖಿಸಲಾಗಿದೆ. ಆದರೆ ₹31 ಲಕ್ಷದ ಬಜೆಟ್‌ನಲ್ಲಿ ಮಿತವ್ಯಯ ಎಲ್ಲಿಂದ ಬಂತು? ಜನಪ್ರತಿನಿಧಿಗಳು ಜನಸೇವಕರಾಗಿರಬೇಕೇ ಹೊರತು ಜನರ ತೆರಿಗೆ ಹಣದಲ್ಲಿ ರಾಜಭೋಗ ಅನುಭವಿಸುವ ಸವಲತ್ತುದಾರರಾಗಬಾರದು. ಸರ್ಕಾರದ ಈ ಆದ್ಯತೆಯೇ ರಾಜ್ಯದ ಆರ್ಥಿಕ ದುಸ್ಥಿತಿಯ ಕನ್ನಡಿ ಹಿಡಿದಂತಿದೆ.


















