ಬೆಂಗಳೂರು, ನ.28 www.bengaluruwire.com: ಪೆಟ್ರೋಲ್‌ನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ E20 ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡುತ್ತಿರುವ ಗಂಭೀರ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳ (OMC) ಟರ್ಮಿನಲ್‌ಗಳಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ವಿಶೇಷ ತಪಾಸಣೆ ಆರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ದೇವನಗೊಂದಿ ಐಒಸಿಎಲ್ ಟರ್ಮಿನಲ್‌ನಲ್ಲಿ ಅಳತೆ ವ್ಯತ್ಯಾಸ ಪತ್ತೆ:
ನವೆಂಬರ್ 25ರಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ದೇವನಗೊಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಟರ್ಮಿನಲ್‌ಗೆ ದಿಢೀರ್ ಭೇಟಿ ನೀಡಿ, ‘ಮಾಸ್ಟರ್ ಪ್ರೂವಿಂಗ್’ ಪರೀಕ್ಷಾ ವಿಧಾನದ ಮೂಲಕ ಮಾಸ್ ಫ್ಲೋ ಮೀಟರ್‌ಗಳನ್ನು ಪರಿಶೀಲಿಸಿದ್ದಾರೆ. ಈ ತಪಾಸಣೆಯ ವೇಳೆ ಎಥನಾಲ್ ಮತ್ತು ಪೆಟ್ರೋಲ್ ಅಳತೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ.

ಬೇ ನಂಬರ್ 9: ಇಲ್ಲಿನ ಮೀಟರ್‌ನಲ್ಲಿ ಪ್ರತಿ 3,000 ಲೀಟರ್‌ಗೆ 14 ಲೀಟರ್ ಹೆಚ್ಚುವರಿ ಎಥನಾಲ್ ಪೂರೈಕೆಯಾಗುತ್ತಿರುವುದು ಹಾಗೂ ಮೋಟಾರ್ ಗ್ಯಾಸೋಲಿನ್ (ಪೆಟ್ರೋಲ್) ಪ್ರಮಾಣದಲ್ಲಿ 4ರಿಂದ 6 ಲೀಟರ್‌ಗಳಷ್ಟು ಕೊರತೆಯಾಗುತ್ತಿರುವುದು ಪತ್ತೆಯಾಗಿದೆ.
ಬೇ ನಂಬರ್ 4: ಇಲ್ಲಿನ ಮತ್ತೊಂದು ಮಾಸ್ ಫ್ಲೋ ಮೀಟರ್‌ನಲ್ಲಿಯೂ ಪ್ರತಿ 3,000 ಲೀಟರ್‌ಗೆ 3 ಲೀಟರ್ ಹೆಚ್ಚುವರಿ ಎಥನಾಲ್ ಪೂರೈಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಗ್ರಾಹಕರ ಹಿತಾಸಕ್ತಿಗೆ ಧಕ್ಕೆ, ವಾಣಿಜ್ಯ ಬಳಕೆಗೆ ಬ್ರೇಕ್: ಈ ಅಳತೆ ವ್ಯತ್ಯಾಸಗಳು ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ನಿಯಮಗಳನ್ನು ಉಲ್ಲಂಘಿಸಿವೆ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ನೈಜ ಅಳತೆಯಲ್ಲಿ ವ್ಯತ್ಯಾಸವಾಗಿ ಗ್ರಾಹಕರು ಮತ್ತು ವಿತರಕರಿಗೆ ನಷ್ಟವಾಗಲಿದೆ ಎಂದು ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಈ ಮೀಟರ್‌ಗಳ ನಿಖರತೆ ದೃಢಪಡುವವರೆಗೆ ಅವುಗಳನ್ನು ಯಾವುದೇ ವಾಣಿಜ್ಯ ವಹಿವಾಟಿಗೆ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
7 ದಿನಗಳೊಳಗೆ ಉತ್ತರಿಸಲು ಗಡುವು: ಪ್ರಕರಣಕ್ಕೆ ಸಂಬಂಧಿಸಿದಂತೆ ಐಒಸಿಎಲ್ ಟರ್ಮಿನಲ್ ಹಾಗೂ ಅಳತೆ ವ್ಯವಸ್ಥೆಗಳ ನಿರ್ವಹಣೆಯ ಉಸ್ತುವಾರಿ ಅಧಿಕಾರಿಗಳಿಗೆ ಶೋಕಾಸ್ (ಕಾರಣ ಕೇಳುವ) ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ ಏಳು ದಿನಗಳೊಳಗೆ ಈ ಕೆಳಗಿನ ಅಂಶಗಳ ಕುರಿತು ಲಿಖಿತ ವಿವರಣೆ ನೀಡುವಂತೆ ಸೂಚಿಸಲಾಗಿದೆ:
ಎಥನಾಲ್ ಮತ್ತು ಪೆಟ್ರೋಲ್ ಅಳತೆಯಲ್ಲಿ ವ್ಯತ್ಯಾಸ ಉಂಟಾಗಲು ನಿಖರ ಕಾರಣವೇನು?
ಮಾಸ್ ಫ್ಲೋ ಮೀಟರ್ ಹಾಗೂ ಬ್ಯಾಚ್ ಕಂಟ್ರೋಲ್ ಯೂನಿಟ್‌ಗಳ ನಿಖರತೆ ಕಾಪಾಡಲು ಕೈಗೊಂಡ ಕ್ರಮಗಳೇನು?
ಇತ್ತೀಚಿನ ಮಾಪನಾಂಕ ನಿರ್ಣಯ (Calibration) ಮತ್ತು ನಿರ್ವಹಣಾ ದಾಖಲೆಗಳ ವಿವರ ಸಲ್ಲಿಸುವುದು.
ದೋಷಗಳನ್ನು ಸರಿಪಡಿಸಲು ಕೈಗೊಳ್ಳಲಿರುವ ಮುಂದಿನ ಕ್ರಮಗಳ ವರದಿ ನೀಡುವುದು.
ನಿಗದಿತ ಅವಧಿಯೊಳಗೆ ಸಮರ್ಪಕ ಉತ್ತರ ನೀಡದಿದ್ದಲ್ಲಿ ಐಒಸಿಎಲ್ ಟರ್ಮಿನಲ್ ಮತ್ತು ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಹಾಗೂ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ.
















