ನವದೆಹಲಿ/ಬೆಂಗಳೂರು, ಅ.05 www.bengaluruwire.com: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಯುವ ನೇತೃತ್ವದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೇಂದ್ರ ಸರ್ಕಾರದ ಕಠಿಣ ಕ್ರಮಗಳು ಅಥವಾ ನಾಯಕರ ಬಂಧನ ಭೀತಿಯು ತಮ್ಮ ಆಂದೋಲನವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎಚ್ಚರಿಕೆ ನೀಡಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೆಹಲಿಯಲ್ಲಿ ನಡೆಸಲಾದ ಪ್ರತಿಭಟನೆ ವೇಳೆ ಪೊಲೀಸರು ಸುಮಾರು 110 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ಬೆನ್ನಲ್ಲೇ, ಅಕ್ಟೋಬರ್ 10ರೊಳಗೆ ತಮ್ಮನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಥವಾ ಇತರ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ಸಿಜೆಪಿ ಮುಖಂಡರಾದ ಅಶುತೋಷ್ ರಾಂಕಾ, ಅಭಿಜಿತ್ ದಿಪ್ಕೆ ಹಾಗೂ ಸೌರವ್ ದಾಸ್ ಆರೋಪಿಸಿದ್ದಾರೆ.
ನಾವು ದೇಶದ ಪ್ರಜಾಪ್ರಭುತ್ವ ಮತ್ತು ಪಾರದರ್ಶಕತೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರದ ಇಂತಹ ಬೆದರಿಕೆ, ಬಂಧನ ಅಥವಾ ದಬ್ಬಾಳಿಕೆಗೆ ಹೆದರುವುದಿಲ್ಲ; ಅಹಿಂಸಾತ್ಮಕ ಹೋರಾಟ ದೇಶವ್ಯಾಪಿ ಮುಂದುವರಿಯಲಿದೆ ಎಂದು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ: ಕೆಯುಡಬ್ಲ್ಯೂಜೆ ಖಂಡನೆ:
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಕರ್ತವ್ಯದಲ್ಲಿದ್ದ ಮಹಿಳಾ ಪತ್ರಕರ್ತೆಯೊಬ್ಬರಿಗೆ ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಘಟನೆಗೆ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ತೀವ್ರವಾಗಿ ಖಂಡಿಸಿದೆ. ವೃತ್ತಿಪರ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ಈ ರೀತಿಯ ಅಮಾನವೀಯ ವರ್ತನೆ ತೋರಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಮತ್ತು ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡಿದ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸರ್ಕಾರವನ್ನು ಬಲವಾಗಿ ಆಗ್ರಹಿಸಿದ್ದಾರೆ. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಸುರಕ್ಷಿತ ವಾತಾವರಣ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

















