ಕಟ್ಟಡದ ಮೇಲಿನಿಂದ ಕೆಳಗೆ ಬೀಳುತ್ತಿದ್ದ ಪುಟ್ಟ ಬಾಲಕನೊಬ್ಬನನ್ನು ಅಂಗಡಿ ಮಾಲೀಕರೊಬ್ಬರು ಸಮಯಪ್ರಜ್ಞೆ ಮೆರೆದು ಕೈಯಲ್ಲಿ ಹಿಡಿದು ರಕ್ಷಿಸಿರುವ ರೋಚಕ ಘಟನೆ ಈಜಿಪ್ಟ್‌ನ ಗಿಜಾದಲ್ಲಿ ನಡೆದಿದೆ. ಅಪಾಯದ ಕ್ಷಣದಲ್ಲಿ ಕ್ಷಣಾರ್ಧದಲ್ಲೇ ಸ್ಪಂದಿಸಿದ ಅಂಗಡಿಕಾರನ ಸಾಹಸ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಸೆಪ್ಟೆಂಬರ್ 29ರಂದು ಈಜಿಪ್ಟ್‌ನ ಗಿಜಾ ವ್ಯಾಪ್ತಿಯ ಅರ್ಡ್ ಎಲ್-ಲಿವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರು ಎಂದಿನಂತೆ ಓಡಾಡುತ್ತಿದ್ದ ವೇಳೆ, ಬಹುಮಹಡಿ ಕಟ್ಟಡದ ಬಾಲ್ಕನಿಯಿಂದ 5 ವರ್ಷದ ಬಾಲಕನೊಬ್ಬ ಏಕಾಏಕಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ.
ಚೀರಾಟ ಕೇಳಿ ಮಿಂಚಿನಂತೆ ಓಡಿಬಂದ ಅಹ್ಮದ್ ರಗಬ್:
ಘಟನೆಯ ವೇಳೆ ಸಮೀಪದಲ್ಲೇ ಇದ್ದ ಅಂಗಡಿ ಮಾಲೀಕ ಅಹ್ಮದ್ ರಗಬ್ ಅವರಿಗೆ ಇದ್ದಕ್ಕಿದ್ದಂತೆ ಜೋರಾದ ಅಳು ಹಾಗೂ ಕೂಗಾಟದ ಶಬ್ದ ಕೇಳಿಸಿದೆ. ಮೇಲ್ಮುಖವಾಗಿ ನೋಡಿದಾಗ ಮಗು ಬಾಲ್ಕನಿಯ ತುದಿಯಿಂದ ಜಾರಿ ಬೀಳುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತ ರಗಬ್, ಮಗು ನೆಲಕ್ಕೆ ಅಪ್ಪಳಿಸುವ ಮುನ್ನವೇ ಓಡಿ ಬಂದು ಕೆಳಗೆ ನಿಂತು ಮಗುವನ್ನು ಸುರಕ್ಷಿತವಾಗಿ ಹಿಡಿದುಕೊಂಡಿದ್ದಾರೆ.

’ಯೋಚಿಸಲು ಸಮಯವೇ ಇರಲಿಲ್ಲ’:
ಸಾಹಸದ ಕುರಿತು ಮಾತನಾಡಿದ ಅಹ್ಮದ್ ರಗಬ್, “ನಾನು ಅಗತ್ಯ ಸಾಮಗ್ರಿ ಖರೀದಿಸಲು ಹೊರಬಂದಾಗ ಜನರ ಆಕ್ರಂದನ ಕೇಳಿಸಿತು. ಎಲ್ಲವೂ ಕೇವಲ 2-3 ಸೆಕೆಂಡುಗಳಲ್ಲಿ ನಡೆದುಹೋಯಿತು. ಮಗುವನ್ನು ಹಿಡಿಯಲು ಸಾಧ್ಯವೇ ಇಲ್ಲವೇ ಎಂದು ಯೋಚಿಸುವಷ್ಟೂ ಸಮಯವಿರಲಿಲ್ಲ. ಬಾಲಕನನ್ನು ಕಾಪಾಡಬೇಕೆಂಬ ಒಂದೇ ಗುರಿಯಿಂದ ಓಡಿದೆ. ಮಗುವನ್ನು ರಕ್ಷಿಸಿದ ಮೇಲೆಯೇ ನಾನು ಎಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದೆ ಎಂಬ ಅರಿವಾಯಿತು,” ಎಂದು ಹೇಳಿದ್ದಾರೆ.
ರಕ್ಷಣೆಯ ಬಳಿಕ ನಡುಕ: ನೆಟ್ಟಿಗರ ಸಲಾಮ್
ಮಗುವನ್ನು ರಕ್ಷಿಸಿದ ತಕ್ಷಣ ರಗಬ್ ಅವರು ಬಾಲಕನನ್ನು ಎತ್ತಿಕೊಂಡು ಬಾಲ್ಕನಿಯತ್ತ ನೋಡುತ್ತಾ ಸಮೀಪದ ಹಾಸಿಗೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿದೆ. ಘಟನೆಯ ಭಯದಿಂದ ಅವರು ಕೆಲಕಾಲ ನಡುಗಿದ್ದಾರೆ. “ಇದೇ ಘಟನೆ ಮತ್ತೆ ನೂರು ಬಾರಿ ಮರುಕಳಿಸಿದರೂ ನನ್ನಿಂದ ಹೀಗೆ ಹಿಡಿಯಲು ಸಾಧ್ಯವಾಗುತ್ತದೆಯೋ ಇಲ್ಲವೋ ತಿಳಿಯದು,” ಎಂದು ಅವರು ವಿಸ್ಮಯ ವ್ಯಕ್ತಪಡಿಸಿದ್ದಾರೆ.
ಪ್ರಾಣದ ಹಂಗು ತೊರೆದು ಪುಟ್ಟ ಕಂದಮ್ಮನ ಜೀವ ಉಳಿಸಿದ ಅಹ್ಮದ್ ರಗಬ್ ಅವರ ಸಮಯಪ್ರಜ್ಞೆ ಹಾಗೂ ನಿಸ್ವಾರ್ಥ ಕಾರ್ಯಕ್ಕೆ ಜಗತ್ತಿನಾದ್ಯಂತ ನೆಟ್ಟಿಗರು ‘ರಿಯಲ್ ಹೀರೋ’ ಎಂದು ಪ್ರಶಂಸೆಗಳ ಸುರಿಮಳೆಗರೆಯುತ್ತಿದ್ದಾರೆ.

















