ಬೆಂಗಳೂರು, ಅ.04 www.bengaluruwire.com: ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೇರಲು ವಿನಯತೆ ಮತ್ತು ಪ್ರಾಮಾಣಿಕತೆ ಅತ್ಯಂತ ಮುಖ್ಯ ಎಂದು ಹಿರಿಯ ನಟ ಎಸ್. ದೊಡ್ಡಣ್ಣ ಪ್ರತಿಪಾದಿಸಿದ್ದಾರೆ. ಸನ್ನಡತೆ ಮತ್ತು ಪರಿಶ್ರಮ ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಭವಿಷ್ಯವನ್ನು ಕಟ್ಟಿಕೊಡಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗವು ಆಯೋಜಿಸಿರುವ ಎರಡು ವಾರಗಳ ವಿಶೇಷ ಅಭಿಶಿಕ್ಷಣ (Orientation) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರರಂಗದ ತಮ್ಮ ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡ ದೊಡ್ಡಣ್ಣ, ಕನ್ನಡ ಸಿನಿರಂಗದ ದಿಗ್ಗಜ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಡಿಜಿಟಲ್ ಯುಗದಲ್ಲಿ ಗಟ್ಟಿ ಪತ್ರಿಕೋದ್ಯಮಕ್ಕೆ ಮನ್ನಣೆ: ದಿನೇಶ್ ಅಮೀನ್ ಮಟ್ಟು:
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, “ಪತ್ರಿಕೋದ್ಯಮವನ್ನು ಕೇವಲ ಉದ್ಯೋಗವನ್ನಾಗಿ ನೋಡದೆ ತೀವ್ರ ಆಸಕ್ತಿ ಹಾಗೂ ಬದ್ಧತೆಯಿಂದ ಮುನ್ನಡೆದರೆ ಯಶಸ್ಸು ಖಚಿತ. ಇಂದಿನ ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮ ಕ್ರಾಂತಿಯು ಯುವ ಪತ್ರಕರ್ತರಿಗೆ ವಿಪುಲ ಅವಕಾಶಗಳನ್ನು ಒದಗಿಸಿದೆ. ಓದುಗರು ಹಾಗೂ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವ ನೈಜ, ಗಟ್ಟಿಯಾದ ಪತ್ರಕರ್ತರಿಗೆ ಇಂದಿಗೂ ಸಮಾಜದಲ್ಲಿ ಸದಾ ಮನ್ನಣೆ ಇರುತ್ತದೆ,” ಎಂದು ವಿಶ್ಲೇಷಿಸಿದರು.

ಔಪಚಾರಿಕ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ: ಅಶೋಕ್ ಕಶ್ಯಪ್: ಗೌರವ ಅತಿಥಿಯಾಗಿದ್ದ ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮಾತನಾಡಿ, “ಹಿಂದೆ ಚಿತ್ರರಂಗಕ್ಕೆ ಸಂಬಂಧಿಸಿದ ವೃತ್ತಿಪರ ತರಬೇತಿ ಪಡೆಯಲು ಸೂಕ್ತ ವೇದಿಕೆಗಳಿರಲಿಲ್ಲ. ಆದರೆ ಇಂದಿನ ಪೀಳಿಗೆಗೆ ಸಿನಿಮಾ ನಿರ್ಮಾಣ ಹಾಗೂ ಮಾಧ್ಯಮ ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಕಲಿಯಲು ಉತ್ತಮ ಅವಕಾಶಗಳಿವೆ. ಯುವಜನತೆ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕೌಶಲ ಬೆಳೆಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕಿ ಪ್ರೊ. ವಾಹಿನಿ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ರಾಜೇಶ್ವರಿ ಆರ್., ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















