ಬೆಂಗಳೂರು / ನವದೆಹಲಿ, ಅ.01 www.bengaluruwire.com: ದಸರಾ ಮತ್ತು ದೀಪಾವಳಿ ಹಬ್ಬಗಳ ಸಡಗರ ಆರಂಭವಾಗುವ ಹೊಸ್ತಿಲಲ್ಲೇ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಹಣದುಬ್ಬರದ ಬಿಸಿ ತಟ್ಟಿದೆ.
ತಿಂಗಳ ಮೊದಲ ದಿನವಾದ ಅಕ್ಟೋಬರ್ 1 ರಂದು ತೈಲ ಮಾರುಕಟ್ಟೆ ಕಂಪನಿಗಳು (OMCs) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿದ್ದು, 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರವನ್ನು ಭರ್ಜರಿಯಾಗಿ ಹೆಚ್ಚಿಸಿವೆ. ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ₹62.50 ರಿಂದ ₹71.50 ರಷ್ಟು ಹೆಚ್ಚಾಗಿದೆ.
ಸಾಮಾನ್ಯ ಜನರು ಹಾಗೂ ಸಣ್ಣಪುಟ್ಟ ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಯಾಟರಿಂಗ್ ಉದ್ಯಮಿಗಳು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿದ್ದು, ಈ ದರ ಹೆಚ್ಚಳದಿಂದ ವ್ಯಾಪಾರ ವಲಯದ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ.
ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಪರಿಷ್ಕೃತ ದರಗಳ ವಿವರ:

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ ₹62.50 ರಷ್ಟು ಹೆಚ್ಚಾಗಿದ್ದು, ಪರಿಷ್ಕೃತ ದರ ₹2,810.00 ಕ್ಕೆ ತಲುಪಿದೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ₹63.50 ರಷ್ಟು ಏರಿಕೆಯಾಗಿದ್ದು, ಹೊಸ ದರ ₹2,764.50 ಆಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು ₹67.00 ರಷ್ಟು ದರ ಏರಿಕೆಯಾಗಿದ್ದು, 19 ಕೆಜಿ ಸಿಲಿಂಡರ್ ಬೆಲೆ ಅಂದಾಜು ₹2,898.00 ಕ್ಕೆ ಮುಟ್ಟಿದೆ.
ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಸಿಲಿಂಡರ್ ಬೆಲೆಯಲ್ಲಿ ₹66.50 ರಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ ದರ ₹2,983.00 ಆಗಿದೆ.
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ₹70.00 ರಷ್ಟು ದರ ಹೆಚ್ಚಿಸಲಾಗಿದ್ದು, ಹೊಸ ಬೆಲೆ ₹2,954.00 ಕ್ಕೆ ಏರಿಕೆಯಾಗಿದೆ.
ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಅತ್ಯಧಿಕ ಅಂದರೆ ₹71.50 ರಷ್ಟು ಬೆಲೆ ಏರಿಕೆಯಾಗಿದ್ದು, ಹೊಸ ದರ ₹3,100.50 ಕ್ಕೆ ತಲುಪಿದೆ.
ಹೋಟೆಲ್, ರೆಸ್ಟೋರೆಂಟ್ ಕ್ಷೇತ್ರಗಳ ಮೇಲೆ ನೇರ ಪ್ರಭಾವ:
ಹಬ್ಬದ ದಿನಗಳಲ್ಲಿ ಹೊರಗಡೆ ಊಟ, ತಿಂಡಿ ಹಾಗೂ ಸಿಹಿತಿಂಡಿಗಳ ವ್ಯಾಪಾರ ಹೆಚ್ಚಿರುತ್ತದೆ. ಆದರೆ ವಾಣಿಜ್ಯ ಸಿಲಿಂಡರ್ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಇದು ಅಂತಿಮವಾಗಿ ತಿಂಡಿ-ತಿನಿಸುಗಳ ಬೆಲೆ ಏರಿಕೆಗೆ ದಾರಿಯಾಗುವ ಸಾಧ್ಯತೆಗಳಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಪ್ರತಿ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಮತ್ತು ವಿದೇಶಿ ವಿನಿಮಯ ದರಗಳನ್ನು ಆಧರಿಸಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ದರಗಳನ್ನು ಪರಿಷ್ಕರಿಸುತ್ತವೆ. ಸದ್ಯಕ್ಕೆ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.



















