ಬೆಂಗಳೂರು, ಅ.01 www.bengaluruwire.com: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಾಗರಿಕ ಸ್ನೇಹಿ ಆಡಳಿತದತ್ತ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ತನ್ನ 100ನೇ ಸಾರ್ವಜನಿಕ ಮುಕ್ತ ಸಭೆಯನ್ನು (Open House Meeting) ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಮುಕ್ತ ಸಭೆಗಳ ಮೂಲಕ ದಾಖಲಾದ ಒಟ್ಟು 7,410 ದೂರುಗಳ ಪೈಕಿ ಬರೋಬ್ಬರಿ 4,759 ದೂರುಗಳನ್ನು ಪ್ರಾಧಿಕಾರ ಯಶಸ್ವಿಯಾಗಿ ಇತ್ಯರ್ಥಪಡಿಸಿದೆ.
ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಈ 100ನೇ ಸಭೆಯ ಅಧ್ಯಕ್ಷತೆಯನ್ನು ಪ್ರಾಧಿಕಾರದ ಅಧ್ಯಕ್ಷ ಎನ್. ಎ. ಹ್ಯಾರಿಸ್ ವಹಿಸಿದ್ದರು. ಸಭೆಯಲ್ಲಿ ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಉಪಸ್ಥಿತರಿದ್ದರು.
ಮುಖಾಮುಖಿ ಪರಿಹಾರಕ್ಕೆ ನಾಂದಿ:

ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ತಮ್ಮ ಕಡತಗಳ ಸ್ಥಿತಿಗತಿ ಹಾಗೂ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡಲು ಜುಲೈ 3, 2025 ರಂದು ಈ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಪರಿಶೀಲಿಸುವುದರಿಂದ ತ್ವರಿತ ಇತ್ಯರ್ಥ ಸಾಧ್ಯವಾಗಿದೆ. ಈ ಜನಪರ ಆಡಳಿತಕ್ಕೆ ಸಾರ್ವಜನಿಕ ಸಂಪರ್ಕ ಮಂಡಳಿಯ (PRCI) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಏನಿದು ‘ಬಿಡಿಎ ಗ್ಯಾರಂಟಿ’?:
ಕುಂದುಕೊರತೆಗಳ ನಿವಾರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ‘ಬಿಡಿಎ ಗ್ಯಾರಂಟಿ’ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಒಳಬರುವ ಕರೆಗಳ ಮೂಲಕ 69,686 ಹಾಗೂ ವಾಟ್ಸಾಪ್ ಮೂಲಕ 3,630 ವಿಚಾರಣೆಗಳು ದಾಖಲಾಗಿವೆ.
ಪೋರ್ಟಲ್, ಏಕೀಕೃತ ಟಪಾಲು ವ್ಯವಸ್ಥೆ, ಇಮೇಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದೂರಿಗೂ ಪ್ರತ್ಯೇಕ ‘ಗ್ರೀವೆನ್ಸ್ ಐಡಿ’ (Grievance ID) ದೊರೆಯಲಿದ್ದು, ಸಾರ್ವಜನಿಕರು ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡಬಹುದು.
ಕಲಾಪದ ಪಾರದರ್ಶಕತೆಗಾಗಿ ಸಭೆಯನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ.
ಕಾಲಮಿತಿಯ ಪರಿಹಾರದ ಗಡುವು:
ಸಮಸ್ಯೆಗಳ ಗಂಭೀರತೆಗೆ ಅನುಗುಣವಾಗಿ ಕಾಲಮಿತಿ ನಿಗದಿಪಡಿಸಲಾಗಿದೆ:
ಜರೂರು ದೂರುಗಳು: 7 ದಿನಗಳು
ಸಾಮಾನ್ಯ ಅರ್ಜಿಗಳು: 30 ದಿನಗಳು
ಓಪನ್ ಹೌಸ್ ದೂರುಗಳು: ಗರಿಷ್ಠ 100 ದಿನಗಳು
ಪಾರದರ್ಶಕ ಹಾದಿಯ ಸಂಕೇತ:
“100ನೇ ಸಾರ್ವಜನಿಕ ಮುಕ್ತ ಸಭೆಯು ಬಿಡಿಎ ಸಾಗುತ್ತಿರುವ ಪಾರದರ್ಶಕ ಹಾದಿಯ ಸಂಕೇತ. ‘ಬಿಡಿಎ ಗ್ಯಾರಂಟಿ’ ಮೂಲಕ ನಾಗರಿಕರ ಪ್ರತಿಯೊಂದು ಸಮಸ್ಯೆಗೆ ಕಾಲಮಿತಿಯೊಳಗೆ ನ್ಯಾಯ ಒದಗಿಸುವುದೇ ನಮ್ಮ ಪ್ರಮುಖ ಗುರಿ.” – ಎನ್. ಎ. ಹ್ಯಾರಿಸ್, ಬಿಡಿಎ ಅಧ್ಯಕ್ಷರು


















