ಬೆಂಗಳೂರು,ಅ.02 www.bengaluruwire.com: ರಾಜ್ಯದ ಪಡಿತರ ಚೀಟಿದಾರರಿಗೆ , ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರೇಷನ್ ಕಾರ್ಡ್ ಇ-ಕೆವೈಸಿ (e-KYC) ಮಾಡಿಸಲು ನ್ಯಾಯಬೆಲೆ ಅಂಗಡಿಗಳು ಮತ್ತು ನಾಗರಿಕ ಸೇವಾ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುತ್ತಿದ್ದ ಸಾರ್ವಜನಿಕರಿಗೆ ಪರಿಹಾರ ನೀಡಿದೆ.
ಸಂಕಷ್ಟಕ್ಕೆ ತೆರೆ ಬಿದ್ದಿದ್ದು, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ನೆರವಾಗುವ ‘ಅನ್ನ ಸೇವೆ’ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ.
ಶಿವಾಜಿನಗರದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಈ ನೂತನ ‘ಅನ್ನ ಸೇವೆ’ ಮೊಬೈಲ್ ಆ್ಯಪ್‌ಗೆ ಅಧಿಕೃತ ಚಾಲನೆ ನೀಡಿದರು. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ, ಪಾರದರ್ಶಕತೆ ಹಾಗೂ ವೇಗವನ್ನು ತರುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಲಭ್ಯ:

ಪೈಲಟ್ ಯೋಜನೆಯ ಅಂಗವಾಗಿ ಈ ಸೇವೆಯನ್ನು ಮೊದಲ ಹಂತದಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ,ಹಾವೇರಿ, ಕಾರವಾರ (ಉತ್ತರ ಕನ್ನಡ), ಬಳ್ಳಾರಿ, ಬೀದರ್, ಕೊಪ್ಪಳ, ಪ್ರಸ್ತುತ ಈ 8 ಜಿಲ್ಲೆಗಳ ಜನರು ಆ್ಯಪ್ ಬಳಸಬಹುದಾಗಿದ್ದು, ಮುಂದಿನ 20 ದಿನಗಳಲ್ಲಿ ಉಳಿದ ಎಲ್ಲಾ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಸರತಿ ಸಾಲು ಹಾಗೂ ಸರ್ವರ್ ಸಮಸ್ಯೆಗೆ ಮುಕ್ತಿ:
ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಇ-ಕೆವೈಸಿ ಕಡ್ಡಾಯವಾಗಿದ್ದರಿಂದ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ನ್ಯಾಯಬೆಲೆ ಅಂಗಡಿಗಳ ಬಳಿ ತಾಂತ್ರಿಕ ದೋಷ, ಸರ್ವರ್ ಡೌನ್ ಮತ್ತು ಬೆರಳಚ್ಚು (Biometric) ಸರಿಯಾಗಿ ಹೊಂದಾಣಿಕೆಯಾಗದೆ ವೃದ್ಧರು, ಅಂಗವಿಕಲರು ಹಾಗೂ ದಿನಗೂಲಿ ನೌಕರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ‘ಅನ್ನ ಸೇವೆ’ ಆ್ಯಪ್ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.
ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು:
ಮನೆಯಲ್ಲೇ ಕುಳಿತು ಇ-ಕೆವೈಸಿ: ಸ್ಮಾರ್ಟ್‌ಫೋನ್ ಇರುವ ಪ್ರತಿಯೊಬ್ಬರೂ ತಮ್ಮ ಮತ್ತು ಕುಟುಂಬದ ಸದಸ್ಯರ ಪರಿಶೀಲನೆಯನ್ನು ಉಚಿತವಾಗಿ ಹಾಗೂ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು.
ಮುಖ ಚಹರೆ ಗುರುತು (Face Authentication): ವಯಸ್ಸಾದವರು ಮತ್ತು ಮಕ್ಕಳ ಬೆರಳಚ್ಚು ಮೂಡದಿದ್ದಾಗ ‘Aadhaar FaceRD’ ತಂತ್ರಜ್ಞಾನದ ಮುಖಾಂತರ ಮುಖ ಸ್ಕ್ಯಾನ್ ಮಾಡಿ ಇ-ಕೆವೈಸಿ ಮಾಡಬಹುದು.
ಸಮಯ ಮತ್ತು ವೆಚ್ಚ ಉಳಿತಾಯ: ಮಧ್ಯವರ್ತಿಗಳ ಕಾಟವಿಲ್ಲದೆ, ಸೈಬರ್ ಕೆಫೆಗಳಿಗೆ ಹಣ ವ್ಯಯಿಸದೇ ನೇರವಾಗಿ ಪ್ರಕ್ರಿಯೆ ಮುಗಿಸಬಹುದು.
ಅಕ್ರಮಗಳಿಗೆ ತಡೆ: ನಕಲಿ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಲು ಮತ್ತು ಅರ್ಹ ಫಲಾನುಭವಿಗಳಿಗೆ ಪಡಿತರ ತಲುಪಿಸಲು ಈ ವ್ಯವಸ್ಥೆ ಸಹಕಾರಿಯಾಗಿದೆ.
ಮೊಬೈಲ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್‌ನಿಂದ ‘Anna Seve’ ಹಾಗೂ ‘Aadhaar FaceRD’ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆ್ಯಪ್‌ನಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.
ಒಟಿಪಿ (OTP) ಅಥವಾ ಮುಖ ಗುರುತಿಸುವಿಕೆ (Face Authentication) ಆಯ್ಕೆಯನ್ನು ಆರಿಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿ. ಆನ್‌ಲೈನ್ ಬಳಕೆ ಕಷ್ಟವೆನಿಸುವ ನಾಗರಿಕರು ಎಂದಿನಂತೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ಮೂಲಕವೇ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಮುಂದುವರಿಯಲಿದೆ.



















