ಬೆಂಗಳೂರು, ಅ.02 www.bengaluruwire.com : ರಾಜ್ಯದಲ್ಲಿ ಕೃಷಿ ಹಾಗೂ ಕೃಷಿಯೇತರ ಜಮೀನುಗಳ ಅಳತೆ (ಲ್ಯಾಂಡ್ ಸರ್ವೆ) ಮಾಡಿಸಲು ಬಯಸುವ ಸಾರ್ವಜನಿಕರಿಗೆ ಕಂದಾಯ ಇಲಾಖೆಯು ಶಾಕ್ ನೀಡಿದೆ.
ಕಂದಾಯ ಇಲಾಖೆಯ ‘ಮೋಜಿಣಿ’ ವ್ಯವಸ್ಥೆಯಡಿ ಸ್ವೀಕರಿಸುವ ವಿವಿಧ ಅಳತೆ ಅರ್ಜಿಗಳ ಶುಲ್ಕವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಪರಿಷ್ಕೃತ ನೂತನ ದರಗಳು ಅಕ್ಟೋಬರ್ 1 ರಿಂದಲೇ ಜಾರಿಗೆ ಬಂದಿವೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅನ್ವಯ, ಪಹಣಿಯ (ಆರ್‌ಟಿಸಿ) ಕಾಲಂ ನಂ-9 ರಲ್ಲಿ ದಾಖಲಾಗಿರುವ ಅರ್ಜಿದಾರರ ಹಕ್ಕಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಹದ್ದುಬಸ್ತು, ತತ್ಕಾಲ್ ಪೋಡಿ ಹಾಗೂ ಪ್ರಿ-ಅಲಿನೇಷನ್ ನಕ್ಷೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದೆ.
ಪರಿಷ್ಕೃತ ಅರ್ಜಿ ಶುಲ್ಕದ ವಿವರಗಳು:

ಪ್ರಿ-ಅಲಿನೇಷನ್ ನಕ್ಷೆ (ನಗರ ಪ್ರದೇಶ): 2.00 ಎಕರೆ ವರೆಗಿನ ವಿಸ್ತೀರ್ಣಕ್ಕೆ ₹3,200 ಶುಲ್ಕ ನಿಗದಿಯಾಗಿದ್ದು, 2.00 ಎಕರೆಗಿಂತ ಹೆಚ್ಚಿದ್ದಲ್ಲಿ ಪ್ರತಿ ಹೆಚ್ಚುವರಿ ಎಕರೆಗೆ ಅಥವಾ ಭಾಗಶಃ ಎಕರೆಗೆ ₹1,000 ಪಾವತಿಸಬೇಕು.
ಪ್ರಿ-ಅಲಿನೇಷನ್ ನಕ್ಷೆ ಮತ್ತು ತತ್ಕಾಲ್ ಪೋಡಿ: (ಗ್ರಾಮೀಣ ಪ್ರದೇಶ): 2.00 ಎಕರೆ ವರೆಗಿನ ಜಮೀನಿಗೆ ₹2,300 ಶುಲ್ಕ ನಿಗದಿಯಾಗಿದ್ದು, 2.00 ಎಕರೆಗಿಂತ ಹೆಚ್ಚಿದ್ದಲ್ಲಿ ಪ್ರತಿ ಹೆಚ್ಚುವರಿ ಎಕರೆಗೆ ₹400 ಶುಲ್ಕ ನಿಗದಿಪಡಿಸಲಾಗಿದೆ.
ಹದ್ದುಬಸ್ತು ಅರ್ಜಿ (ನಗರ ಪ್ರದೇಶ): 2.00 ಎಕರೆ ವರೆಗಿನ ವಿಸ್ತೀರ್ಣಕ್ಕೆ ₹2,500 ಶುಲ್ಕ ನಿಗದಿಯಾಗಿದ್ದು, 2.00 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಹೆಚ್ಚುವರಿ ಎಕರೆಗೆ ₹400 ಪಾವತಿಸಬೇಕು.
ಹದ್ದುಬಸ್ತು ಅರ್ಜಿ (ಗ್ರಾಮೀಣ ಪ್ರದೇಶ): 2.00 ಎಕರೆ ವರೆಗಿನ ಜಮೀನಿಗೆ ₹1,000 ಶುಲ್ಕ ನಿಗದಿಯಾಗಿದ್ದು, 2.00 ಎಕರೆಗಿಂತ ಹೆಚ್ಚಿದ್ದಲ್ಲಿ ಪ್ರತಿ ಹೆಚ್ಚುವರಿ ಎಕರೆಗೆ ₹300 ಶುಲ್ಕ ನಿಗದಿಪಡಿಸಲಾಗಿದೆ.
ನೋಟೀಸ್ ಶುಲ್ಕ: ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಅಕ್ಕಪಕ್ಕದ ಪ್ರತಿ ಬಾಜುದಾರರಿಗೆ ₹25 ನೋಟೀಸ್ ಶುಲ್ಕ ಅನ್ವಯವಾಗಲಿದೆ.
ಪರವಾನಗಿ ಭೂಮಾಪಕರ ಸಂಭಾವನೆ ಹೆಚ್ಚಳ:
ಅರ್ಜಿ ಶುಲ್ಕದ ಜತೆಗೆ ಖಾಸಗಿ ಪರವಾನಗಿ ಭೂಮಾಪಕರ (Licensed Surveyors) ಸೇವಾ ಸಂಭಾವನೆಯನ್ನು ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ.
ಪೂರ್ಣ ಪ್ರಮಾಣದಲ್ಲಿ ಅಪ್‌ಲೋಡ್ ಮಾಡಿ ಇತ್ಯರ್ಥಪಡಿಸಿದ ಪ್ರತಿ ಅರ್ಜಿಗೆ ಈ ಹಿಂದೆ ನೀಡುತ್ತಿದ್ದ ₹1,200 ರ ಬದಲಿಗೆ ಈಗ ₹2,000 ನೀಡಲಾಗುತ್ತದೆ. ಬಹುಮಾಲೀಕತ್ವದ ಹಿಸ್ಸಾ ಬ್ಲಾಕ್ ವಿಂಗಡಿಸಿದ ಪ್ರತಿ ಹೆಚ್ಚುವರಿ ಬ್ಲಾಕ್‌ಗೆ ₹300 ನಿಗದಿಪಡಿಸಲಾಗಿದೆ.
ಆಧುನಿಕ ಉಪಕರಣಗಳು ಅಥವಾ ರೋವರ್ ಬಳಸಿ ಅಳತೆ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಪ್ರತಿ ಅರ್ಜಿಗೆ ₹1,000 ಹಾಗೂ ಹೆಚ್ಚುವರಿ ಹಿಸ್ಸಾ ಬ್ಲಾಕ್‌ಗೆ ₹200 ನೀಡಲು ಆದೇಶಿಸಲಾಗಿದೆ.
ಭೂಮಾಪಕರ ಸಂಭಾವನೆ ಪಾವತಿಯ ವಿಳಂಬ ತಪ್ಪಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಡಿಡಿಒಗಳ (DDOs) ಮೂಲಕ ‘ಖಜಾನೆ-2’ ತಂತ್ರಾಂಶದಡಿ ನೇರವಾಗಿ ಸಂಭಾವನೆ ಪಾವತಿಸಲು ಕ್ರಮಕೈಗೊಳ್ಳಲಾಗಿದೆ.
ಈ ಹೊಸ ದರಗಳು ನಿನ್ನೆಯಿಂದ (ಅ.1)ಸಲ್ಲಿಕೆಯಾಗುವ ಹೊಸ ಅರ್ಜಿಗಳಿಗೆ ಮಾತ್ರ ಅನ್ವಯವಾಗಲಿದೆ. ಈಗಾಗಲೇ ಸಲ್ಲಿಕೆಯಾಗಿ ಬಾಕಿ ಇರುವ ಅರ್ಜಿಗಳಿಗೆ ಹಳೆಯ ನಿಯಮಗಳೇ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.



















