ಬೆಂಗಳೂರು, ಜೂ.27 www.bengaluruwire.com: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಗತ್ಯವಿರುವಷ್ಟು ಪೂರೈಕೆ ಮಾಡುವುದಾಗಿ ತಿಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬೆಂಗಳೂರು ಹೋಟೆಲುಗಳ ಸಂಘ, ಇದೇ ವೇಳೆ ಏರಿಕೆಯಾಗಿರುವ ಸಿಲಿಂಡರ್ ದರವನ್ನು ಗಣನೀಯವಾಗಿ ಇಳಿಕೆ ಮಾಡುವಂತೆ ಮನವಿ ಮಾಡಿದೆ.
ಕಳೆದ ಫೆಬ್ರವರಿಯಲ್ಲಿ ವಾಣಿಜ್ಯ ಬಳಕೆಯ ಒಂದು ಗ್ಯಾಸ್ ಸಿಲಿಂಡರ್ ಬೆಲೆ 1,814 ರೂಪಾಯಿ ಇತ್ತು. ಆದರೆ, ಪ್ರಸ್ತುತ ಜೂನ್ ತಿಂಗಳಲ್ಲಿ ಈ ದರ 3,198 ರೂಪಾಯಿಗೆ ಏರಿಕೆಯಾಗಿದೆ. ಕೇವಲ ಕಳೆದ ಐದು ತಿಂಗಳಲ್ಲಿ ಬೆಲೆ ಶೇಕಡಾ 80ರಷ್ಟು ಹೆಚ್ಚಳವಾದಂತಾಗಿದೆ. ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ತಕ್ಷಣ ಇಳಿಕೆ ಮಾಡಬೇಕು ಎಂದು ಸಂಘವು ಆಗ್ರಹಿಸಿದೆ.
ಇದರ ಜೊತೆಗೆ, ವಾಣಿಜ್ಯ ಬಳಕೆಯ ಗ್ಯಾಸ್ ಮೇಲಿನ ಶೇಕಡಾ 18ರಷ್ಟು ಜಿಎಸ್ಟಿ ದರವನ್ನು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗೆ ಅನ್ವಯಿಸುವಂತೆ ಶೇಕಡಾ 5ಕ್ಕೆ ಇಳಿಕೆ ಮಾಡಬೇಕು ಎಂದು ಸಂಘ ವಿನಂತಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಉತ್ತಮ ನಿರ್ಧಾರದ ನಿರೀಕ್ಷೆಯಲ್ಲಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್, ಅಧ್ಯಕ್ಷರಾದ ಸುಬ್ರಮಣ್ಯ ಹೊಳ್ಳ ಎಸ್. ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.






















