ಬೆಂಗಳೂರು, ಜೂ.15 www.bengaluruwire.com: ರಾಜಧಾನಿಯ ಕಲಾಭಿಮಾನಿಗಳಿಗೆ ಹಾಗೂ ಉದಯೋನ್ಮುಖ ಗಾಯಕರಿಗೆ ಹೊಸದೊಂದು ಸಂಗೀತದ ಅನುಭವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ‘ಭಜ ಮನ’ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಜಯನಗರದ ಯುವಕ ಸಂಘದಲ್ಲಿ ‘ಪರಮ್ ಕಲ್ಚರ್’ ಹಾಗೂ ‘ಹರಿವಂಶ ಗ್ರೂಪ್’ ಜಂಟಿಯಾಗಿ ಆಯೋಜಿಸಿದ್ದ ಈ ಎರಡು ದಿನಗಳ ಶಿಬಿರದಲ್ಲಿ 45 ಮಂದಿ ಗಾಯನ ಆಸಕ್ತರು ಭಾಗವಹಿಸಿ, ಖ್ಯಾತ ಯುವ ಶಾಸ್ತ್ರೀಯ ಗಾಯಕಿ ಸೂರ್ಯಗಾಯತ್ರಿ ಅವರಿಂದ ನೇರ ಮಾರ್ಗದರ್ಶನ ಪಡೆದರು. ಜೂನ್ 12 ಮತ್ತು 13ರಂದು ನಡೆದ ಈ ಕಾರ್ಯಾಗಾರವು ಸಂಗೀತಾಸಕ್ತರಲ್ಲಿ ಹೊಸ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತೆ ಹಾಗೂ ಜಾಗತಿಕ ಮಟ್ಟದಲ್ಲಿ ಭಕ್ತಿ ಸಂಗೀತದ ಮೂಲಕ ಸನ್ಸೇಷನ್ ಸೃಷ್ಟಿಸಿರುವ ಸೂರ್ಯಗಾಯತ್ರಿ ಅವರು, ಶಿಬಿರಾರ್ಥಿಗಳಿಗೆ ಭಜನೆಗಳು, ದಾಸರಪದಗಳು ಹಾಗೂ ಅಭಂಗ್‌ಗಳ ಸೂಕ್ಷ್ಮತೆಗಳನ್ನು ಧಾರೆರೆದರು. ಸತತ ನಾಲ್ಕು ಗಂಟೆಗಳ ಕಾಲ ನಡೆದ ಈ ವಿಶೇಷ ನೇರ ಕಲಿಕಾ ಸರಣಿಯಲ್ಲಿ, ಗಾಯಕಿಯು ತಮ್ಮ ಕಲಾ ಪಯಣ ಹಾಗೂ ಭಕ್ತಿ ಸಂಗೀತದ ಆಳವಾದ ಒಳನೋಟಗಳನ್ನು ಹಂಚಿಕೊಂಡರು. ಪಾಲ್ಗೊಂಡ ಪ್ರತಿಯೊಬ್ಬರಿಗೂ ಉಚಿತವಾಗಿ ವಿಶೇಷ ಸಾಹಿತ್ಯ, ನೋಟ್ಸ್ ಹಾಗೂ ಪಾಸ್ ವಿತರಿಸಲಾಯಿತು.

ಈ ಕಾರ್ಯಾಗಾರದ ಮತ್ತೊಂದು ವಿಶೇಷವೆಂದರೆ, ಇದು ಕೇವಲ ಕಲಿಕೆಗೆ ಮಾತ್ರ ಸೀಮಿತವಾಗದೆ ಪ್ರತಿಭೆಗಳಿಗೆ ದೊಡ್ಡ ವೇದಿಕೆಯನ್ನೂ ಒದಗಿಸಿಕೊಟ್ಟಿದ್ದು. ಶಿಬಿರದಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿದ ಕಲಾಭಿಮಾನಿಗಳಿಗೆ, ಜೂನ್ 14ರ ಭಾನುವಾರ ಮೀನಾಕ್ಷಿ ರಂಗಮಂಚದಲ್ಲಿ ನಡೆದ ಭವ್ಯ ಲೈವ್ ಕನ್ಸರ್ಟ್‌ನಲ್ಲಿ ಸೂರ್ಯಗಾಯತ್ರಿ ಅವರೊಂದಿಗೇ ವೇದಿಕೆ ಹಂಚಿಕೊಂಡು ಹಾಡುವ ಬಂಪರ್ ಅವಕಾಶ ಲಭಿಸಿತು.

ಇತ್ತೀಚೆಗಷ್ಟೇ ಅಮೆರಿಕದ 29 ನಗರಗಳಲ್ಲಿ ಯಶಸ್ವಿ ಪ್ರವಾಸ ಮುಗಿಸಿ ಮರಳಿರುವ ಸೂರ್ಯಗಾಯತ್ರಿ ಅವರ ಗಾಯನದ ಗಾರುಡಿ ಮತ್ತು ಮಾರ್ಗದರ್ಶನ, ಬೆಂಗಳೂರು ವೈರ್ ಓದುಗರಿಗೆ ಹಾಗೂ ರಾಜಧಾನಿಯ ಸಂಗೀತಾಸಕ್ತರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ.




















