ಬೆಂಗಳೂರು, ಜೂ.16 www.bengaluruwire.com: ನೈರುತ್ಯ ರೈಲ್ವೆ ಇಲಾಖೆಯು ಮುಂಬರುವ ಪದೋನ್ನತಿ ಪರೀಕ್ಷೆಗಳಲ್ಲಿ ಕೇವಲ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಿಗೆ ಮಾತ್ರ ಅವಕಾಶ ನೀಡಿ, ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡಿಗರ ಭಾಷಾ ಹಕ್ಕುಗಳನ್ನು ಕಸಿದುಕೊಳ್ಳುವ ಇಂತಹ ಪ್ರಯತ್ನಗಳನ್ನು ಸಹಿಸುವುದಿಲ್ಲ ಮತ್ತು ಜೂನ್ 25ರಂದು ನಡೆಯಲಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ ಏನು?:
ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಜೂನ್ 4, 2026ರಂದು ಹೊರಡಿಸಿದ ಅಧಿಸೂಚನೆಯಂತೆ, ಲೆವೆಲ್-5ರ ಶ್ರೇಣಿಯಲ್ಲಿ 15% LDCE ಕೋಟಾದಡಿ ‘ಗೂಡ್ಸ್ ಟ್ರೇನ್ ಮ್ಯಾನೇಜರ್’ (Goods Train Manager) ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಇದಕ್ಕಾಗಿ ಜೂನ್ 25 ರಂದು ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗಗಳಲ್ಲಿ ಕಂಪ್ಯೂಟರ್ ಆಧಾರಿತ (CBT) ಪದೋನ್ನತಿ ಪರೀಕ್ಷೆ ನಿಗದಿಯಾಗಿದೆ. ಆದರೆ, ಈ ಬಹುಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದ್ದು, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ.

ಕನ್ನಡಿಗರ ಮೇಲೆ ನಡೆಯುತ್ತಿರುವ ಮೋಸದ ಯುದ್ಧ: ಕರವೇ ಕಿಡಿ:
“ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ” ಎಂದು ಬಣ್ಣಿಸಿರುವ ಟಿ.ಎ. ನಾರಾಯಣಗೌಡ ಅವರು, ರೈಲ್ವೆ ಇಲಾಖೆಯ ಈ ತಾರತಮ್ಯ ನೀತಿಯ ವಿರುದ್ಧ ಕರವೇ ತೊಡೆತಟ್ಟಿ ನಿಲ್ಲಲಿದೆ ಎಂದಿದ್ದಾರೆ. “ರೈಲ್ವೆ ಇಲಾಖೆಯಲ್ಲಿ ಗುಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಗೆ ಅರ್ಹರಾಗಿರುವ ನೂರಾರು ಕನ್ನಡಿಗ ಉದ್ಯೋಗಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. 110 ಪ್ರಶ್ನೆಗಳನ್ನು ಒಳಗೊಂಡ ಋಣಾತ್ಮಕ (Negative) ಮಾರ್ಕಿಂಗ್ ಇರುವ ಕಠಿಣ ಪರೀಕ್ಷೆ ಇದಾಗಿದ್ದು, ತಾಯಿನುಡಿಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಕಿತ್ತುಕೊಳ್ಳುವುದು ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಕೃತ್ಯವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ರದ್ದುಗೊಳಿಸಲು ಆಗ್ರಹ; ಗಲಭೆಗಳ ಎಚ್ಚರಿಕೆ:
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ, ಕೇಂದ್ರ ಸರ್ಕಾರ ಮತ್ತು ರೈಲ್ವೆ ಬೋರ್ಡ್ ಕನ್ನಡಿಗರ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿದೆ. ಇತರೆ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಸಿಗುವ ಗೌರವ ಕರ್ನಾಟಕದಲ್ಲಿ ಸಿಗುತ್ತಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರೈಲ್ವೆ ಬೋರ್ಡ್ ಮತ್ತು ನೈರುತ್ಯ ರೈಲ್ವೆ ಆಡಳಿತವು ತಕ್ಷಣವೇ ಈ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಥವಾ ಕನ್ನಡ ಭಾಷೆಯನ್ನು ಸೇರಿಸಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರವೇ ಆಗ್ರಹಿಸಿದೆ. ಒಂದು ವೇಳೆ ಜೂನ್ 25ರಂದು ಕನ್ನಡವಿಲ್ಲದೆ ಪರೀಕ್ಷೆ ನಡೆಸಲು ಮುಂದಾದರೆ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯಲಿದ್ದು, ಉಂಟಾಗುವ ಯಾವುದೇ ಅನಾಹುತಗಳಿಗೆ ರೈಲ್ವೆ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ನಾರಾಯಣಗೌಡರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.





















