ಬೆಂಗಳೂರು, ಡಿ.01 www.bengaluruwire.com : ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA)ದ ಅಡಿಯಲ್ಲಿ ಐದು ಪ್ರತ್ಯೇಕ ಪಾಲಿಕೆಗಳನ್ನು ರಚಿಸಿರುವುದು ಬೆಂಗಳೂರಿನ ಆರ್ಥಿಕ ಬೆನ್ನೆಲುಬನ್ನೇ ಮುರಿಯಲಿದೆ.
ಅವೈಜ್ಞಾನಿಕವಾಗಿ ಸೃಷ್ಟಿಸಲಾಗಿರುವ ಈ ಪಾಲಿಕೆಗಳು ಕೇವಲ ಒಂದೇ ವರ್ಷದಲ್ಲಿ ಆರ್ಥಿಕವಾಗಿ ದಿವಾಳಿಯಾಗಲಿವೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅಂಕಿ-ಅಂಶಗಳ ಸಹಿತ ಎಚ್ಚರಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ನೂತನ ವ್ಯವಸ್ಥೆಯು ಹೇಗೆ ಬೆಂಗಳೂರನ್ನು ಆರ್ಥಿಕ ಅಧೋಗತಿಗೆ ತಳ್ಳಲಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವೇತನದ ಹೊರೆ ಮೂರು ಪಟ್ಟು ಹೆಚ್ಚಳ:

ಹಿಂದಿನ ಬಿಬಿಎಂಪಿಯಲ್ಲಿ 17 ಇಲಾಖೆಗಳಲ್ಲಿ ಕೇವಲ 2,818 ಅಧಿಕಾರಿ ಮತ್ತು ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಇವರ ವೇತನ ಹಾಗೂ ಪೌರಕಾರ್ಮಿಕರ ವೆಚ್ಚ ಸೇರಿ ವಾರ್ಷಿಕ ಸುಮಾರು ₹1,176 ಕೋಟಿ ವೆಚ್ಚವಾಗುತ್ತಿತ್ತು. ಆದರೆ, ಈಗ 5 ಹೊಸ ಪಾಲಿಕೆಗಳಿಗೆ ಕನಿಷ್ಠ 6,326 ಖಾಯಂ ನೌಕರರ ಅಗತ್ಯವಿದ್ದು, ಇವರ ವೇತನ, ಪಿಂಚಣಿ ಹಾಗೂ ಗುತ್ತಿಗೆ ನೌಕರರ ವೆಚ್ಚ ಸೇರಿ ವಾರ್ಷಿಕ ಕನಿಷ್ಠ ₹3,492 ಕೋಟಿ ರೂ.ಗಳ ಬೃಹತ್ ಮೊತ್ತ ಬೇಕಾಗುತ್ತದೆ. ಅಂದರೆ, ಆಡಳಿತಾತ್ಮಕ ವೆಚ್ಚವೊಂದೇ ಮೂರು ಪಟ್ಟು ಹೆಚ್ಚಾಗಲಿದೆ ಎಂದು ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ಶೂನ್ಯ ಬಜೆಟ್:
ರಮೇಶ್ ಅವರು ನೀಡಿರುವ ಲೆಕ್ಕಾಚಾರದ ಪ್ರಕಾರ, 5 ಪಾಲಿಕೆಗಳಲ್ಲಿ ಆಸ್ತಿ ತೆರಿಗೆ, ನಕ್ಷೆ ಮಂಜೂರಾತಿ ಶುಲ್ಕ ಸೇರಿದಂತೆ ಒಟ್ಟು ಆದಾಯ ಸುಮಾರು ₹5,850 ಕೋಟಿಗಳಷ್ಟು ನಿರೀಕ್ಷಿಸಲಾಗಿದೆ. ಆದರೆ, ನೌಕರರ ವೇತನ (₹3,492 ಕೋಟಿ), ಕಚೇರಿ ಹಾಗೂ ಮೂಲಸೌಕರ್ಯ ನಿರ್ವಹಣೆ (₹1,700 ಕೋಟಿ) ಮತ್ತು ತ್ಯಾಜ್ಯ ವಿಲೇವಾರಿ ವೆಚ್ಚ (₹1,100 ಕೋಟಿ) ಸೇರಿದರೆ, ವಾರ್ಷಿಕ ಕಡ್ಡಾಯ ವೆಚ್ಚವೇ ₹6,300 ಕೋಟಿ ದಾಟಲಿದೆ.
ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುವಾಗ, ರಸ್ತೆ, ಚರಂಡಿ, ಉದ್ಯಾನವನ ಮತ್ತು ಕೆರೆಗಳ ಅಭಿವೃದ್ಧಿಗೆ ಹಣವೆಲ್ಲಿದೆ? ಎಂಬುದು ಅವರ ಪ್ರಶ್ನೆ. ನಗರದ ಅಭಿವೃದ್ಧಿಗೆ ವಾರ್ಷಿಕ ₹6,000 ಕೋಟಿ ರೂ.ಗಳ ಅಗತ್ಯವಿದ್ದರೂ, ಹೊಸ ವ್ಯವಸ್ಥೆಯಲ್ಲಿ ನಯಾಪೈಸೆಯೂ ಉಳಿಯುವುದಿಲ್ಲ. ಇದು ಬೆಂಗಳೂರನ್ನು ವಿಶ್ವದ ಮುಂದೆ ನಗೆಪಾಟಲಿಗೀಡು ಮಾಡಲಿದೆ ಎಂದು ಅವರು ಚಾಟಿ ಬೀಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಅಖಂಡ ಬೆಂಗಳೂರನ್ನು ಒಡೆದು, ಆರ್ಥಿಕ ಶಿಸ್ತನ್ನು ಗಾಳಿಗೆ ತೂರಿರುವ ಕಾಂಗ್ರೆಸ್ ಸರ್ಕಾರವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಪತ್ರದಲ್ಲಿ ಎನ್.ಆರ್. ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.























