ಬೆಂಗಳೂರು, ಜ.1 www.bengaluruwire.com : ಹೊಸ ವರ್ಷದ ಸ್ವಾಗತ ಕೋರುವ, ಸಂಭ್ರಮಾಚರಣೆಯ ನೆಪದಲ್ಲಿ ಡಿ.31 ರಂದು ಕುಡಿದು ವಾಹನ ಚಲಾಯಿಸಿದವರ ಮೇಲೆ ಬೆಂಗಳೂರು ಸಂಚಾರ ಪೊಲೀಸರು ದಂಡ ಪ್ರಯೋಗ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಸರ್ಕಾರ ಮಧ್ಯರಾತ್ರಿ 1 ರಿಂದ 2ರೊಳಗೆ ಆಚರಣೆ ಮುಗಿಸಲು ಗಡುವು ನೀಡಿತ್ತು.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಹೊಸ ವರ್ಷದ ಆಚರಣೆಗೆ ಅನುಮತಿ ನೀಡಲಾಗಿತ್ತು. ನಿನ್ನೆ ರಾತ್ರಿ 9 ಗಂಟೆಯ ನಂತರ ಪ್ರಮುಖ ಫ್ಲೈಓವರ್‌ಗಳು ಬಂದ್ ಮಾಡಲಾಗಿತ್ತು. ಆದರೆ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಬೆಂಗಳೂರು ಸಂಚಾರ ಪೊಲೀಸರು ಒಟ್ಟು 28,127 ವಾಹನಗಳನ್ನು ತಪಾಸಣೆ ಮಾಡಿ, ಕುಡಿದು ಗಾಡಿ ಓಡಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಒಟ್ಟು 513 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇನ್ನೊಂದೆಡೆ ಹೊಸ ವರ್ಷದ ಆಚರಣೆ ನೆಪದ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಮದ್ಯಪ್ರಿಯರು ಹೆಚ್ಚಾಗಿ ಮದ್ಯ ಖರೀದಿಸಿದ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಗೆ ಬರಪೂರ ಆದಾಯ ಹರಿದು ಬಂದಿದೆ. ಕೇವಲ ಡಿ.31ರ ಒಂದೇ ದಿನ ಕೆಎಸ್ ಬಿಸಿಎಲ್ ನಿಂದ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ಸಮಯದವರೆಗೆ 308 ಕೋಟಿ ರೂ. ಮೊತ್ತದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯು ಇದೊಂದೇ ದಿನ 250 ಕೋಟಿ ರೂ. ಮೊತ್ತದ ಮದ್ಯ ಮಾರಾಟ ಮಾಡುವ ಗುರಿ ಹೊಂದಿತ್ತು. ಇನ್ನು ಅದರ ಹಿಂದಿನ ದಿನ ಅಂದರೆ ಡಿ.30 ರಂದು 201.12 ಕೋಟಿ ರೂ. ಮೌಲ್ಯದ ಬೀರ್ ಮತ್ತು ಭಾರತೀಯ ಮದ್ಯವು ಮಾರಾಟವಾಗಿತ್ತು.




















