ಬೆಂಗಳೂರು, ಅ.10 www.bengaluruwire.com : ನಗರದ ಕನ್ನಿಂಗ್ ಹ್ಯಾಮ್ ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಹೊಸದಂದು ಟ್ವಿಸ್ಟ್ ಸಿಕ್ಕಿದೆ.
ಬಿಬಿಎಂಪಿ ವತಿಯಿಂದ ಖಾಸಗಿ ಕಂಪನಿಯೊಂದು ಅಳವಡಿಸುತ್ತಿದ್ದ ಬಸ್ ಶೆಲ್ಟರ್ ಕಳುವಾಗಿದ್ದರ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೆ.30ರಂದು ಕಳ್ಳತನ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಮುಂದುವರೆಸಿದ ಹೈಗ್ರೌಂಡ್ಸ್ ಪೊಲೀಸರಿಗೆ ಶಾಕ್ ಕಾದಿತ್ತು.
ಏಕೆಂದರೆ ಬಿಬಿಎಂಪಿಯ ಶಿವಾಜಿನಗರ ವಲಯ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಿದಾಗಲೇ ಅವರಿಗೆ ತಿಳಿದಿದ್ದು, ಆ ಬಸ್ ಶೆಲ್ಟರ್ ಅನ್ನು ಕಳ್ಳತನ ಮಾಡಿಲ್ಲ. ಬದಲಿಗೆ ಆ ಜಾಗದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಗುತ್ತಿಗೆ ಪಡೆದಿದ್ದ ಸೈನ್ ಪೋಸ್ಟ್ (Signpost) ಏಜೆನ್ಸಿ ಅಸಮರ್ಪಕವಾಗಿ ನಿರ್ಮಾಣ ಮಾಡಿದ್ದ ಹಾಗೂ ಆಪೂರ್ಣಗೊಂಡಿರುವ ಬಸ್ ಶೆಲ್ಟರ್ (Structure) ತೆರವುಗೊಳಿಸಿ, ಅದರ ಬಿಡಿಭಾಗಗಳಾಗಿ ವಿಂಗಡಿಸಿ ವಾರ್ಡ್ ಕಛೇರಿಯ ಉಗ್ರಾಣದಲ್ಲಿ ಪಾಲಿಕೆ ಅಧಿಕಾರಿಗಳು ಇಟ್ಟಿದ್ದರು ಎಂಬ ವಿಷಯ ಕೇಳಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಏಕೆಂದರೆ ಸಾರ್ವಜನಿಕ ಸ್ಥಳದಲ್ಲಿ ಮುಂಜಾಗ್ರತೆ ವಹಿಸದೆ ಲೋಹದ ಬಸ್ ತಂಗುದಾಣ ನಿರ್ಮಿಸುತ್ತಿದ್ದರು. ಈ ವಿಚಾರ ತಿಳಿದ ಪಾಲಿಕೆಯ ವಸಂತನಗರ ಉಪವಿಭಾಗದ ಎಇಇ ಸೈನ್ ಪೋಸ್ಟ್ ಏಜನ್ಸಿಗೆ ಗುತ್ತಿಗೆ ನೀಡಿದ ಕಾರ್ಯಾದೇಶ ಪ್ರತಿಯನ್ನು ಕಚೇರಿಗೆ ಸಲ್ಲಿಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಸಾಕಷ್ಟು ಮುಂಜಾಗ್ರತೆವಹಿಸಿ ಪೂರ್ಣಗೊಳಿಸುವಂತೆ ಸೂಚಿಸಿ ಪತ್ರ ಏಜನ್ಸಿಯವರಿಗೆ ಬರೆದಿದ್ದರು.

ಆದರೆ ಏಜನ್ಸಿಯವರು ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಕಾಮಗಾರಿಯನ್ನು ಆಪೂರ್ಣಗೊಳಿಸಿ ಸಂಬಂಧಪಟ್ಟ ಕಾರ್ಯಾದೇಶ ಪತ್ರದ ದಾಖಲೆಗಳನ್ನು ಸಹ ಈ ಕಛೇರಿಗೆ ಸಲ್ಲಿಸದೇ ಇರುವುದರಿಂದ ಪಾಲಿಕೆ ಎಂಜಿನಿಯರ್ ಗಳೇ ಪ್ರಯಾಣಿಕರ ಹಿತದೃಷ್ಟಿಯಿಂದ ಆ ಬಸ್ ಶೆಲ್ಟರ್ ಬಿಡಿಭಾಗಗಳನ್ನು ತಮ್ಮ ವಾರ್ಡ್ ಕಚೇರಿ ಉಗ್ರಾಣದಲ್ಲಿಟ್ಟಿದ್ದರು.

ಆದರೆ ಈ ವಿಷಯ ತಿಳಿಯದ ಸೈನ್ ಪೋಸ್ಟ್ ಏಜನ್ಸಿಯವರು ಬಸ್ ಶೆಲ್ಟರ್ ಕಾಣೆಯಾಗಿದೆ ಎಂದು ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಅಸಲಿ ವಿಷಯ ಏಜನ್ಸಿಯವರಿಗೂ ಮನವರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ ಶೆಲ್ಟರ್ ತೆರವು ವಿಷಯ ಪಾಲಿಕೆ ಅಧಿಕಾರಿಗಳ ನಡುವೆ ಸಂವಹನ ಕೊರತೆಯೇ ಎಡವಟ್ಟಿಗೆ ಕಾರಣ :
ಬಿಬಿಎಂಪಿಯ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ (TEC) ಮೂಲಕ ನಗರದಲ್ಲಿ ಖಾಸಗಿ ಕಂಪನಿಗಳಿಂದ ಗುತ್ತಿಗೆ ಆಧಾರದ ಮೇಲೆ ಬಸ್ ಶೆಲ್ಟರ್ ಅಳವಡಿಸಲಾಗುತ್ತಿದೆ. ಆದರೆ ಅಪಾಯಕಾರಿ ರೀತಿಯಲ್ಲಿ ಮುಂಜಾಗ್ರತೆ ವಹಿಸದೆ ಸೈನ್ ಪೋಸ್ಟ್ ಸಂಸ್ಥೆ ಅಪೂರ್ಣವಾಗಿ ಬಸ್ ಶೆಲ್ಟರ್ ನಿರ್ಮಿಸುತ್ತಿದ್ದಿದ್ದನ್ನು ಶಿವಾಜಿನಗರ ವಾರ್ಡ್ ಕಚೇರಿವರು ಏಜನ್ಸಿ ಗಮನಕ್ಕಾಗಲೀ, ಪಾಲಿಕೆ ಟಿಇಸಿ ಸೆಲ್ ನವರಿಗಾಗಲಿ ಮಾಹಿತಿ ನೀಡದೆ ತಮ್ಮ ವಾರ್ಡ್ ಕಚೇರಿ ಗೋಡೌನ್ ಗೆ ಈ ಬಸ್ ಶಲ್ಟರ್ ಸಾಮಗ್ರಿಗಳನ್ನು ಇಟ್ಟಿದ್ದು, ಇಷ್ಟೆಲ್ಲಾ ಎಡವಟ್ಟಿಗೆ ಕಾರಣ ಎಂದು ಟಿಇಸಿ ಸೆಲ್ ವಿಭಾಗದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.




















