ಬೆಂಗಳೂರು, ಆ.06 www.bengaluruwire.com: ಅದ್ದೂರಿಯಾಗಿ ಕಟೌಟ್ ಹಾಕಿ, ನಾಯಕರು ಹಾರ-ತುರಾಯಿ ಧರಿಸಿ ಲೋಕಾರ್ಪಣೆಗೊಳಿಸಿದ್ದ ಬಿಡಿಎಯ ನಾಡಪ್ರಭು ಕೆಂಪೇಗೌಡ ಬಡಾವಣೆ (NPKL) ನೂತನ ರಸ್ತೆ ಕಾಮಗಾರಿಯ ಬಣ್ಣ ಕೇವಲ ಒಂದೇ ತಿಂಗಳಿನಲ್ಲಿ ಕಳಚಿಬಿದ್ದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೂನ್ 27ರಂದು ಉದ್ಘಾಟಿಸಿದ್ದ 10.76 ಕಿ.ಮೀ ಉದ್ದದ ಹಾಗೂ 320 ಅಡಿ ಅಗಲದ ಮೇಜರ್ ಆರ್ಟಿಯಲ್ ರಸ್ತೆಯ (MAR) ಪಾದಚಾರಿ ಮಾರ್ಗವು ಈಗ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿ ನಿಂತಿದೆ.
ಸೆಕ್ಟರ್-ಎಲ್ ಬಳಿ ತೆರೆದುಕೊಂಡ ಪಾತಾಳ ಗುಂಡಿ:
ಎನ್‌ಪಿ ಕೆ ಎಲ್ ಬಡಾವಣೆ ವ್ಯಾಪ್ತಿಯ ಸೆಕ್ಟರ್-ಎಲ್ ಬಳಿ ಎಂಎಆರ್ ಸರ್ವಿಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ಸ್ಲಾಬ್ ಸಂಪೂರ್ಣವಾಗಿ ಕಿತ್ತುಬಿದ್ದು ದೊಡ್ಡ ರಂಧ್ರ ಬಿದ್ದಿದೆ. ಸ್ಥಳೀಯ ನಿವಾಸಿಗಳು ಚಿತ್ರೀಕರಿಸಿರುವ ವಿಡಿಯೋದಲ್ಲಿ ಕಾಮಗಾರಿಯ ಜೊಳ್ಳುತನ ಸ್ಪಷ್ಟವಾಗಿ ಬಯಲಾಗಿದೆ.

ಸಿಮೆಂಟ್ ಬದಲಿಗೆ ಶೀಟ್/ಪ್ಲೈವುಡ್ ಬಳಕೆಯ ಶಂಕೆ: ಸ್ಲಾಬ್‌ಗೆ ಬಲ ನೀಡಲು ಆಂತರಿಕವಾಗಿ ಸರಿಯಾದ ಕಾಂಕ್ರೀಟ್ ಪ್ರೊಫೈಲಿಂಗ್ ಅಥವಾ ಪ್ಯಾಕಿಂಗ್ ಮಾಡಿಲ್ಲ. ಪ್ಲೈವುಡ್/ಶೀಟ್ ಹಾಕಿ ಮೇಲ್ಭಾಗದಲ್ಲಿ ತೆಳುವಾದ ಸಿಮೆಂಟ್ ಪ್ಲ್ಯಾಸ್ಟರಿಂಗ್ ಮಾಡಲಾಗಿದೆ.
ಕೈ ತಾಗಿದರೆ ಉದುರುವ ಕಾಂಕ್ರೀಟ್: ವಿಡಿಯೋದಲ್ಲಿ ನಾಗರೀಕರೊಬ್ಬರು ತೋರಿಸಿರುವಂತೆ, ಅಂಚುಗಳಲ್ಲಿರುವ ಕಾಂಕ್ರೀಟ್ ಚೂರುಗಳು ಹಗುರವಾದ ಒತ್ತಡಕ್ಕೂ ಪುಡಿಯಾಗಿ ಉದುರುತ್ತಿವೆ.
ಅಪಾಯಕಾರಿ ಸನ್ನಿವೇಶ: ಪಾದಚಾರಿ ಮಾರ್ಗದಲ್ಲಿ ನಡೆದಾಡುವ ನಾಗರಿಕರು ಅಥವಾ ಮಕ್ಕಳು ತಪ್ಪಿ ಹೆಜ್ಜೆ ಇಟ್ಟರೆ ನೇರವಾಗಿ ಚರಂಡಿ ಗುಂಡಿಗೆ ಬೀಳುವ ಅಪಾಯವಿದೆ.
ಬಿಡಿಎ ಅಧಿಕಾರಿಗಳು-ಗುತ್ತಿಗೆದಾರರ ‘ಅಪವಿತ್ರ ಮೈತ್ರಿ’ಗೆ ಆಕ್ರೋಶ:
ಸಿಎಂ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಸಚಿವ ಕೃಷ್ಣಭೈರೇಗೌಡ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರ ದೊಡ್ಡ ಕಟೌಟ್‌ಗಳನ್ನು ಹಾಕಿ ಜೂನ್ 27ರಂದು ಈ ರಸ್ತೆಯನ್ನು ಪ್ರಚಾರ ಗಿಟ್ಟಿಸಿಕೊಂಡು ಉದ್ಘಾಟಿಸಲಾಗಿತ್ತು. ಆದರೆ, ಒಂದೇ ತಿಂಗಳಲ್ಲಿ ಮಳೆನೀರು ಮೋರಿಗೆ ಹಾಕಿದ ಸ್ಲಾಬ್‌ಗಳು ಮುರಿದುಬೀಳುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: https://bengaluruwire.com/2026/06/27/bengaluru-wall-of-gratitude-cm-dk-shivakumar-kempegowda-jayanti/

“ಮಾಜಿ ಸಚಿವ ದಿವಂಗತ ಎಸ್.ಎಂ. ಕೃಷ್ಣ ಹೆಸರಿನ ಟೋಲ್ ಮುಕ್ತ ರಸ್ತೆಯಲ್ಲಿ ದಿನೇ ದಿನೇ ಕಳಪೆ ಕಾಮಗಾರಿಗಳು ಬೆಳಕಿಗೆ ಬರುತ್ತಿರುವುದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಗೆ ಸ್ಪಷ್ಟ ಸಾಕ್ಷಿಯಾಗಿದೆ.”
— ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ
ಸ್ಥಳೀಯ ನಿವಾಸಿಗಳ ಆಗ್ರಹವೇನು?:
ತಕ್ಷಣದ ತನಿಖೆ: ಎಂಎಆರ್ ಯೋಜನೆಯಲ್ಲಿ ನಡೆದಿರುವ ಕಳಪೆ ಕಾಮಗಾರಿ ಕುರಿತು ಉನ್ನತ ಮಟ್ಟದ ತಾಂತ್ರಿಕ ತನಿಖೆಯಾಗಬೇಕು.
ಗುತ್ತಿಗೆದಾರರಿಗೆ ಬ್ಲ್ಯಾಕ್‌ಲಿಸ್ಟ್: ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಸಂಬಂಧಪಟ್ಟ ಬಿಡಿಎ ಎಂಜಿನಿಯರ್‌ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
ತಕ್ಷಣದ ದುರಸ್ತಿ: ಅಪಾಯಕಾರಿಯಾಗಿ ತೆರೆದುಕೊಂಡಿರುವ ಸ್ಲಾಬ್‌ಗಳನ್ನು ತಕ್ಷಣ ಗುಣಮಟ್ಟದ ಕಾಂಕ್ರೀಟ್‌ನಿಂದ ಮರುನಿರ್ಮಾಣ ಮಾಡಬೇಕು.
ವಿಡಿಯೋ ಸುದ್ದಿ: https://www.instagram.com/reel/DbsaFe_Mguc/?igsh=MXNnZjh3Z2xhMXl4Mw==




















