ಬೆಂಗಳೂರು, ಆ.04 www.bengaluruwire.com: ರಾಜ್ಯ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ‘ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.’ (MEI) ವತಿಯಿಂದ 2025-26ನೇ ಸಾಲಿನ ಮಧ್ಯಂತರ ಡಿವಿಡೆಂಡ್ (ಲಾಭಾಂಶ) 1 ಕೋಟಿ ರೂಪಾಯಿಗಳ ಚೆಕ್ ಅನ್ನು ರಾಜ್ಯ ಸರ್ಕಾರಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಹಸ್ತಾಂತರಿಸಿತು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಈ 1 ಕೋಟಿ ರೂ. ಮೌಲ್ಯದ ಡಿವಿಡೆಂಡ್ ಚೆಕ್ ಅನ್ನು ನೀಡಿದರು.
ರಾಜ್ಯದ ಪ್ರಮುಖ ವಿದ್ಯುತ್ ಉಪಕರಣಗಳ ತಯಾರಿಕಾ ಸಂಸ್ಥೆಯಾಗಿರುವ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ತನ್ನ ಮಧ್ಯಂತರ ಲಾಭಾಂಶವನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡುವ ಮೂಲಕ ಗಮನ ಸೆಳೆದಿದೆ.
ಈ ಮಹತ್ವದ ಸಂದರ್ಭದಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷರಾದ ಮನೋಹರ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ (ಎಂ.ಡಿ) ಅನಿತಾ.ಸಿ ಅವರು ಉಪಸ್ಥಿತರಿದ್ದರು.






















