ನವದೆಹಲಿ, ಆ.06 www.bengaluruwire.com: ಜವಳಿ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭೌಗೋಳಿಕ ಸೂಚಕ (GI) ಮಾನ್ಯತೆಯು ಗ್ರಾಮೀಣ ಕರಕುಶಲಕರ್ಮಿಗಳ ಆದಾಯವನ್ನು ಶೇಕಡಾ 20 ರಿಂದ 30 ರಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
2014 ರಿಂದೀಚೆಗೆ ಬರೋಬ್ಬರಿ 607 ಜಿಐಗಳನ್ನು ನೀಡಲಾಗಿದ್ದು, ಭಾರತವು ಈಗ ಒಟ್ಟು 800 ಕ್ಕೂ ಹೆಚ್ಚು ನೋಂದಾಯಿತ ಜಿಐ ಉತ್ಪನ್ನಗಳಿಗೆ ನೆಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದ್ದು, 2025ರ ಜನವರಿ ವೇಳೆಗೆ ಅಧಿಕೃತ ಜಿಐ ಬಳಕೆದಾರರ ಸಂಖ್ಯೆ 365 ರಿಂದ 29,000 ಕ್ಕೆ ತೀವ್ರವಾಗಿ ಏರಿಕೆಯಾಗಿದೆ. 2030ರ ವೇಳೆಗೆ 10,000 ಜಿಐ ನೋಂದಣಿಗಳ ಮಹತ್ವಾಕಾಂಕ್ಷೆಯ ಗುರಿಯತ್ತ ಭಾರತ ಹೆಜ್ಜೆ ಹಾಕುತ್ತಿದೆ.
ಕರ್ನಾಟಕದ ಹೆಮ್ಮೆ: 49 ಉತ್ಪನ್ನಗಳಿಗೆ ಜಿಐ ಗರಿ:
ದೇಶಾದ್ಯಂತ ಜಿಐ ಮಾನ್ಯತೆ ಪಡೆದ ರಾಜ್ಯಗಳ ಪೈಕಿ ಕರ್ನಾಟಕವು ಮುಂಚೂಣಿಯಲ್ಲಿದ್ದು, 4ನೇ ಅತಿ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ಕರ್ನಾಟಕವು ಒಟ್ಟು 49 ಉತ್ಪನ್ನಗಳಿಗೆ ಜಿಐ ಮಾನ್ಯತೆಯನ್ನು ಪಡೆದುಕೊಂಡಿದೆ. ನಾಡಿನ ಹೆಮ್ಮೆಯಾದ ಚನ್ನಪಟ್ಟಣದ ಸುಂದರವಾದ ಮರದ ಬೊಂಬೆಗಳು, ಮೈಸೂರು ರೇಷ್ಮೆ ಸೇರಿದಂತೆ ಹಲವು ವಿಶಿಷ್ಟ ಉತ್ಪನ್ನಗಳು ಈ ಪಟ್ಟಿಯಲ್ಲಿವೆ. ಇದು ಕೇವಲ ಉತ್ಪನ್ನಗಳ ರಕ್ಷಣೆಯಲ್ಲ, ಬದಲಿಗೆ ಶತಮಾನಗಳಷ್ಟು ಹಳೆಯದಾದ ನಮ್ಮ ಕರಕುಶಲ ಪರಂಪರೆಗೆ ಆರ್ಥಿಕ ಶಕ್ತಿ ತುಂಬುವ ಪ್ರಯತ್ನವಾಗಿದೆ.

ಜಿಐ ನೋಂದಣಿಯಲ್ಲಿ ಟಾಪ್ 10 ರಾಜ್ಯಗಳು:
ಭಾರತದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್ ಹೊಂದಿರುವ ಅಗ್ರ 10 ರಾಜ್ಯಗಳ ಪಟ್ಟಿ ಇಲ್ಲಿದೆ:

ನಕಲಿ ಉತ್ಪನ್ನಗಳಿಗೆ ಕಡಿವಾಣ, ಪರಂಪರೆಯ ರಕ್ಷಣೆ:
ವರ್ಷಗಳ ಕಾಲ, ಗ್ರಾಮೀಣ ಕುಶಲಕರ್ಮಿಗಳು ಗಂಭೀರ ಸವಾಲನ್ನು ಎದುರಿಸುತ್ತಿದ್ದರು. ಉದಾಹರಣೆಗೆ, ಬನಾರಸ್ನ ನೇಕಾರರು ವಾರಗಟ್ಟಲೆ ಶ್ರಮಿಸಿ ಕೈಯಿಂದಲೇ ನೆಯ್ಯುವ ಅಪ್ಪಟ ಬನಾರಸಿ ಸೀರೆಗಳಿಗೆ, ಮಾರುಕಟ್ಟೆಯಲ್ಲಿ ಬರುವ ಯಂತ್ರ-ನಿರ್ಮಿತ ನಕಲಿ ಸೀರೆಗಳಿಂದ ಬಾರಿ ಪೈಪೋಟಿ ಇತ್ತು. ಇದರಿಂದಾಗಿ ಅಸಲಿ ಉತ್ಪನ್ನಗಳಿಗೆ ಬೆಲೆ ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಜಿಐ ಟ್ಯಾಗ್ಗಳು ನಿರ್ಣಾಯಕ ಪಾತ್ರ ವಹಿಸಿವೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಟೀ, ತೆಲಂಗಾಣದ ಪೋಚಂಪಲ್ಲಿ ಇಕ್ಕತ್, ಕಾಶ್ಮೀರದ ಪಶ್ಮಿನಾ, ಬಾಲೂಚರಿ ಸೀರೆಗಳು, ಕನ್ನೌಜ್ನ ಸುಗಂಧ ದ್ರವ್ಯ ಅಥವಾ ನಾಸಿಕ್ ವ್ಯಾಲಿ ವೈನ್ – ಹೀಗೆ ಎಲ್ಲವೂ ಜಿಐ ಮಾನ್ಯತೆಯಿಂದಾಗಿ ತಮ್ಮ ಮೂಲ ಮತ್ತು ಗುಣಮಟ್ಟವನ್ನು ಉಳಿಸಿಕೊಂಡಿವೆ. 2003 ರಲ್ಲಿ ಕಾರ್ಯರೂಪಕ್ಕೆ ಬಂದ ಈ ವ್ಯವಸ್ಥೆಯು ಇಂದು ಗ್ರಾಮೀಣ ಕುಶಲಕರ್ಮಿಗಳಿಗೆ ಜಾಗತಿಕ ಮಾರುಕಟ್ಟೆಯ ಬಾಗಿಲು ತೆರೆದಿದ್ದು, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಆರ್ಥಿಕ ಅವಕಾಶವನ್ನಾಗಿ ಪರಿವರ್ತಿಸುತ್ತಿದೆ.
ಜಿಐ ಟ್ಯಾಗ್ ನೋಂದಣಿ ಮಾಡಿಸಲು ಇರುವ ಕಾರ್ಯ ವಿಧಾನಗಳೇನು?:
ಭಾರತದಲ್ಲಿ ಜಿಐ (GI – Geographical Indication) ಅಂದರೆ ಭೌಗೋಳಿಕ ಸೂಚಕ ಟ್ಯಾಗ್ ಪಡೆಯಲು ನಿಗದಿತವಾದ ಅರ್ಜಿ ನಮೂನೆ (ಫಾರ್ಮ್ GI-1), ವಿವರವಾದ ವಿವರಣೆ ಅಥವಾ ಸ್ಟೇಟ್ಮೆಂಟ್ ಆಫ್ ಕೇಸ್, ಮತ್ತು ಶುಲ್ಕದೊಂದಿಗೆ ಚೆನ್ನೈನಲ್ಲಿರುವ ಭೌಗೋಳಿಕ ಸೂಚಕಗಳ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆಯು ಪರಿಶೀಲನೆ, ಪ್ರಕಟಣೆ ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಒಳಗೊಂಡಿರುತ್ತದೆ.
ಜಿಐ ಟ್ಯಾಗ್ ನೋಂದಣಿ ಹಂತಗಳು:
ಅರ್ಜಿ ಸಲ್ಲಿಕೆ (Filing Application): ನಿರ್ದಿಷ್ಟ ಉತ್ಪನ್ನವನ್ನು ಪ್ರತಿನಿಧಿಸುವ ಸಂಘಟನೆ ಅಥವಾ ಪ್ರಾಧಿಕಾರವು ನಿಗದಿತ ನಮೂನೆಯಲ್ಲಿ (Form GI-1) ಮೂರು ಪ್ರತಿಗಳಲ್ಲಿ, ಉತ್ಪನ್ನದ ವಿಶೇಷತೆ ಮತ್ತು ಭೌಗೋಳಿಕ ಹಿನ್ನೆಲೆಯ ವಿವರಣೆಯೊಂದಿಗೆ ಅರ್ಜಿ ಸಲ್ಲಿಸಬೇಕು.
ಪರಿಶೀಲನೆ (Scrutiny): ರಿಜಿಸ್ಟ್ರಾರ್ ಕಚೇರಿಯ ತಜ್ಞರ ಸಮಿತಿಯು ಅರ್ಜಿಯನ್ನು ಪರಿಶೀಲಿಸುತ್ತದೆ. ಯಾವುದಾದರೂ ಲೋಪವಿದ್ದರೆ ಅದನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗುತ್ತದೆ.
ಜರ್ನಲ್ನಲ್ಲಿ ಪ್ರಕಟಣೆ (Advertisement): ಸ್ವೀಕೃತಗೊಂಡ ಅರ್ತಿಯನ್ನು ‘ಜಿಐ ಜರ್ನಲ್’ (Geographical Indications Journal) ನಲ್ಲಿ ಪ್ರಕಟಿಸಲಾಗುತ್ತದೆ.
ಆಕ್ಷೇಪಣೆ ಆಹ್ವಾನ (Opposition): ಪ್ರಕಟಣೆಗೊಂಡ 3 ರಿಂದ 4 ತಿಂಗಳ ಒಳಗೆ ಯಾರಾದರೂ ಆ ಉತ್ಪನ್ನದ ಕುರಿತು ಆಕ್ಷೇಪಣೆ ಅಥವಾ ವಿರೋಧವಿದ್ದರೆ ಸಲ್ಲಿಸಬಹುದು.
ನೋಂದಣಿ ಪ್ರಮಾಣಪತ್ರ (Registration): ಯಾವುದೇ ಗಂಭೀರ ಆಕ್ಷೇಪಣೆಗಳು ಬಾರದಿದ್ದರೆ ಅಥವಾ ವಿವಾದಗಳು ಬಗೆಹರಿದರೆ, ಜಿಐ ರಿಜಿಸ್ಟ್ರಾರ್ ಅಧಿಕೃತವಾಗಿ ಟ್ಯಾಗ್ ಅನ್ನು ನೋಂದಾಯಿಸಿ ಪ್ರಮಾಣಪತ್ರ ನೀಡುತ್ತಾರೆ. ಇದು ಆರಂಭದಲ್ಲಿ 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.




















