ಬೆಂಗಳೂರು, ಜು.21 www.bengaluruwire.com: ರಾಜಧಾನಿಯ ಜನದಟ್ಟಣೆಯ ಪ್ರದೇಶವಾದ ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದ್ದ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಏಕಾಏಕಿ ಭೀಕರ ಹಲ್ಲೆ ನಡೆಸಿದ್ದಾರೆ.
ಕನ್ನಡಿಗರ ಹೆಸರಿನಲ್ಲಿ ಬಂದ ಪುಂಡರು ಪಾಲಿಕೆಯ ಅಧಿಕಾರಿ ಹಾಗೂ ಜೆಸಿಬಿ ಚಾಲಕರಿಬ್ಬರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ರಂಪಾಟ ನಡೆಸಿದ್ದಾರೆ. ಇದಲ್ಲದೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹಾಗೂ ಸಹಾಯಕ ಎಂಜಿನಿಯರ್ (ಎಇ), ಗಾಯವಾಗಿದೆ.
ಬೆಂಗಳೂರು ವೈರ್ ವರದಿಯಿಂದ ಎಚ್ಚೆತ್ತುಕೊಂಡು ಕಾರ್ಯಾಚರಣೆ:
ಶಿವಾಜಿನಗರ ಬಸ್ ಸ್ಟಾಪ್ ಬಳಿಯ ಅಮಾತನ್ ಕೋ-ಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿ ಹಲವು ವರ್ಷಗಳಿಂದ ಫುಟ್ಪಾತ್ ನುಂಗಿ ನೀರು ಕುಡಿದಿದ್ದ 17ಕ್ಕೂ ಹೆಚ್ಚು ಕಬ್ಬಿಣದ ಶೀಟ್ಗಳ ಅಂಗಡಿಗಳಿಂದಾಗಿ ಪಾದಚಾರಿಗಳು ಪರದಾಡುತ್ತಿದ್ದರು. ಈ ಬಗ್ಗೆ ಸೋಮವಾರ (ಜು.20) ‘ಬೆಂಗಳೂರು ವೈರ್’ ಜಿಪಿಎಸ್ ಆಧಾರಿತ ವಿಡಿಯೋ ಸಾಕ್ಷ್ಯದೊಂದಿಗೆ ರಿಯಾಲಿಟಿ ಚೆಕ್ ನಡೆಸಿ, ವಾಸ್ತವ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ 25 ಪಾಲಿಕೆ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆಗೆ ಇಳಿದಿದ್ದರು. ಈ ಕುರಿತು ಬೆಂಗಳೂರು ವೈರ್ Instagram ಖಾತೆಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು ಅದರ ಲಿಂಕ್ ಇಲ್ಲಿದೆ: https://www.instagram.com/reel/DbAjmJws8oj/?igsh=ZXNweHB5ZHN5cDhy


ಪೆಪ್ಪರ್ ಸ್ಪ್ರೇ, ಗೂಂಡಾಗಿರಿ: ತಲೆಮರೆಸಿಕೊಂಡ ಮುಖ್ಯ ಆರೋಪಿ:
ತೆರವು ಕಾರ್ಯ ನಡೆಯುತ್ತಿದ್ದಾಗ ಕನ್ನಡ ಹೋರಾಟಗಾರರೆಂದು ಹೇಳಿಕೊಂಡು ನುಗ್ಗಿದ ಬಸವರಾಜ್ ನೇತೃತ್ವದ ಗೂಂಡಾಗಳ ಪಡೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದೆ. ಕಾರ್ಯಾಚರಣೆ ತಡೆಯುವ ಉದ್ದೇಶದಿಂದ ಜೆಸಿಬಿ ಚಾಲಕ ಹಾಗೂ ಮಹಿಳಾ ಸಹಾಯಕ ಇಂಜಿನಿಯರ್ ಸಾವಿತ್ರಿ (AE) ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ವಿಕೃತಿ ಮೆರೆದಿದ್ದಾರೆ. ದಾಳಿಯಲ್ಲಿ ಎಇಇ ಮಾಧವ್ ರಾವ್ ಜಾಧವ್, ಎಇಗಳಾದ ಗೌತಮ್ ಎಂಬುವರ ಮೇಲೆ ದಾಳಿ ನಡೆಸಿದ್ದಾರೆ. ಜೆಸಿಬಿ ಚಾಲಕರ ಮೇಲೆಯೂ ಹಲ್ಲೆಯಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಪ್ರಮುಖ ಆರೋಪಿ ಬಸವರಾಜ್ ಪರಾರಿಯಾಗಿದ್ದಾನೆ.

”ಹಿರಿಯ ಅಧಿಕಾರಿಗಳ ಆದೇಶದಂತೆ ನಾವು ತೆರವು ಮಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದರು. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಕಾನೂನುಬದ್ಧ ತೆರವು ಕಾರ್ಯ ನಿಲ್ಲುವುದಿಲ್ಲ” ಎಂದು ಹಲ್ಲೆಗೊಳಗಾದ ಎಇಇ ಜಾಧವ್ ‘ಬೆಂಗಳೂರು ವೈರ್’ಗೆ ಸ್ಪಷ್ಟಪಡಿಸಿದ್ದಾರೆ.

10 ಆರೋಪಿಗಳ ಅರೆಸ್ಟ್; ಸಚಿವರ ಖಡಕ್ ವಾರ್ನಿಂಗ್!
ಘಟನೆ ಕುರಿತು ಮಾಹಿತಿ ನೀಡಿದ ಡಿಸಿಪಿ ವಿಕ್ರಮ್ ಆಮ್ಟೆ, “ಒಟ್ಟು 10 ಜನರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಶೋಧಕ್ಕೆ ವಿಶೇಷ ತಂಡ ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಕಳೆದ 21 ದಿನಗಳಿಂದ ನಗರದೆಲ್ಲೆಡೆ ಒತ್ತುವರಿ ತೆರವು ನಡೆಯುತ್ತಿದ್ದರೂ ಎಲ್ಲಿಯೂ ಇಂತಹ ಅಹಿತಕರ ಘಟನೆ ನಡೆದಿರಲಿಲ್ಲ. ಈ ದುರ್ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, “ಅಧಿಕಾರಿಗಳ ಮೇಲಿನ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆರೋಪಿಗಳ ವಿರುದ್ಧ ಕೊಲೆ ಯತ್ನ (ಸೆಕ್ಷನ್ 307) ಪ್ರಕರಣ ದಾಖಲಿಸಿ” ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶಿವಾಜಿನಗರ ಫುಟ್ ಪಾತ್ ಒತ್ತುವರಿ ಕಾರ್ಯಾಚರಣೆ ನಿಲ್ಲಲ್ಲ:

ಸಚಿವರಾದ ಕೃಷ್ಣ ಬೈರೇಗೌಡ ಅವರ ಕಟ್ಚುನಿಟ್ಚಿನ ಸೂಚನೆಯ ಮೇರೆಗೆ ಬೆಂಗಳೂರು ಕೇಂದ್ರ ಪಾಲಿಕೆಯ ಆಯುಕ್ತರಾದ ಜಗದೀಶ್ ಹಾಗೂ ಹೆಚ್ಚುವರಿ ಆಯುಕ್ತರಾದ ವೆಂಕಟಾಚಲಪತಿ ಅವರು ಶಿವಾಜಿನಗರದಲ್ಲಿ ಖುದ್ದಾಗಿ ಮುಂದೆ ನಿಂತು ಅಲ್ಲಿನ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ.
“ಪಾದಾಚಾರಿ ಮಾರ್ಗ ಒತ್ತುವರಿ ತೆರವು ಮಾಡಲೇಬೇಕು ಎಂಬುದು ಸುಪ್ರೀಂಕೋರ್ಟ್ ಸೂಚನೆಯಾಗಿದ್ದು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದಡಿ ಇಡುವ ಮಾತೇ ಇಲ್ಲ. ಅಲ್ಲದೆ, ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ಮಾಡುವಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ದಾಳಿಕೋರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಸಚಿವ ಕೃಷ್ಣಭೈರೇಗೌಡ ಪುನರುಚ್ಚರಿಸಿದ್ದಾರೆ.
ಜಿಬಿಎ ಅಧಿಕಾರಿ ಮತ್ತು ನೌಕರರ ಸಂಘ ಹೋರಾಟಕ್ಕೆ ಸಜ್ಜು:
“ಇಂದು ಶಿವಾಜಿನಗರದಲ್ಲಿ ಪುಟ್ ಪಾತ್ ತೆರವು ಕಾರ್ಯದಲ್ಲಿ ಇಂಜನಿಯರ್ ಗಳ ಮೇಲೆ ಹಲ್ಲೆ ಮಾಡಿದ ಕೀಡಿಗೇಡಿಗಳನ್ನು ಸಂಜೆಯೊಳಗೆ ಪೋಲಿಸ್ ಇಲಾಖೆಯವರು ಬಂಧಿಸಿದಿದ್ದಲ್ಲಿ ನಾಳೆ ಜಿ.ಬಿ.ಎ.ಯ ಎಲ್ಲಾ ಅಧಿಕಾರಿ/ನೌಕರರು ಕೆಲಸ ಕಾರ್ಯಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ” ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಎಚ್ಚರಿಸಿದ್ದಾರೆ.
ಸಚಿವರ ಸೂಚನೆ ಮೇರೆಗೆ ಪಾಲಿಕೆ ಅಧಿಕಾರಿಗಳು ನಗರದಾದ್ಯಂತ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡುತ್ತಿದ್ದು, ಈವರೆಗೆ ಬರೋಬ್ಬರಿ 600 ಕಿ.ಮೀ ಫುಟ್ಪಾತ್ ಮುಕ್ತಗೊಳಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ‘ಬೆಂಗಳೂರು ವೈರ್’ ಪ್ರಸಾರ ಮಾಡಿದ ವರದಿಗೆ ಪಾಲಿಕೆಯು ತಕ್ಷಣವೇ ಸ್ಪಂದಿಸಿ ಕಾನೂನಾತ್ಮಕವಾಗಿ ಫುಟ್ ಪಾತ್ ಒತ್ತುವರಿ ತೆರುವು ಕಾರ್ಯಾಚರಣೆ ಕೈಗೊಂಡಿದ್ದರೂ, ಕನ್ನಡ ಹೋರಾಟಗಾರರ ಹೆಸರಿನಲ್ಲಿ ಕರ್ತವ್ಯನಿರತ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು ಅಕ್ಷಮ್ಯವಾಗಿದೆ. ಇದನ್ನು “ಬೆಂಗಳೂರು ವೈರ್” ಕೂಡ ಖಂಡಿಸುತ್ತದೆ. ಪಾಲಿಕೆ ಅಧಿಕಾರಿ ಹಾಗೂ ಸಿಬ್ಭಂದಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕಿದೆ.



















