ಶಬರಿಮಲೆ, ಜೂ.15 bengaluruwire.com: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಭಕ್ತಿಪೂರ್ವಕ ಯಾತ್ರೆ ಕೈಗೊಂಡಿದ್ದಾರೆ. ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಶಬರಿಮಲೆಗೆ ಕೈಗೊಂಡಿರುವ ಮೊದಲ ಯಾತ್ರೆ ಇದಾಗಿದ್ದು, ಭಕ್ತರ ಗಮನ ಸೆಳೆದಿದೆ.
ಮುಂಜಾನೆಯೇ ಮಾಲಾಧಾರಣೆ, ಇರುಮುಡಿ ಪೂಜೆ:

ಇಂದು ಬೆಳಗಿನ ಜಾವವೇ ಕೊಚ್ಚಿನ್ ನಗರದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು, ವಿಶೇಷ ಪೂಜೆ ಸಲ್ಲಿಸಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದರು. ಬಳಿಕ ದೇಗುಲದ ಆವರಣದಲ್ಲಿಯೇ ಶ್ರದ್ಧಾಭಕ್ತಿಗಳಿಂದ ಇರುಮುಡಿ ಹೊತ್ತು ಶಬರಿಮಲೆಯ ಸನ್ನಿಧಾನದತ್ತ ತಮ್ಮ ಯಾತ್ರೆ ಆರಂಭಿಸಿದರು.
ಪಂಪಾ ನದಿಯಲ್ಲಿ ಪುಣ್ಯಸ್ನಾನ, ಸಂಜೆ ಪಡಿಪೂಜೆ:

ಮಧ್ಯಾಹ್ನದ ಹೊತ್ತಿಗೆ ಪಂಪಾ ನದಿ ತೀರವನ್ನು ತಲುಪಲಿರುವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರೊಡನೆ ತೆರಳಿರುವ ಭಕ್ತರ ತಂಡವು, ಪಂಪಾ ನದಿಯಲ್ಲಿ ಪುಣ್ಯಸ್ನಾನ ನೆರವೇರಿಸಿ ಶಬರಿಮಲೆ ಬೆಟ್ಟವನ್ನು ಏರಲಿದೆ. ಸಂಜೆ ಅಯ್ಯಪ್ಪ ಸನ್ನಿಧಾನದಲ್ಲಿ ನಡೆಯುವ ಅತ್ಯಂತ ಶ್ರೇಷ್ಠ ‘ಪಡಿ ಪೂಜೆ’ಯಲ್ಲಿ ಪಾಲ್ಗೊಳ್ಳಲಿರುವ ಸಚಿವರು, ತದನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ನಡೆಯುವ ‘ಪುಷ್ಪಾಭಿಷೇಕ’ ದಲ್ಲಿಯೂ ಭಾಗಿಯಾಗಲಿದ್ದಾರೆ. ಇದಕ್ಕೂ ಮೊದಲು ಕೂಡ ಅವರು ಹಲವಾರು ಬಾರಿ ಅಯ್ಯಪ್ಪನ ಸನ್ನಿಧಿಗೆ ಯಾತ್ರೆ ಕೈಗೊಂಡು ಸ್ವಾಮಿಯ ದರ್ಶನ ಪಡೆದಿದ್ದರು.
ಸಚಿವರಿಗೆ ಜೆಡಿಎಸ್ ನಾಯಕರ ಸಾಥ್:
ಕುಮಾರಸ್ವಾಮಿ ಅವರ ಈ ಶಬರಿಮಲೆ ಯಾತ್ರೆಯಲ್ಲಿ ರಾಜ್ಯದ ಹಲವು ಪ್ರಮುಖ ಜೆಡಿಎಸ್ ನಾಯಕರು ಹೆಜ್ಜೆ ಹಾಕಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಶರಣಗೌಡ ಕಂದಕೂರ್, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್, ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ತಂಡ ಕೇಂದ್ರ ಸಚಿವರೊಂದಿಗೆ ಸನ್ನಿಧಾನಕ್ಕೆ ತೆರಳಿದೆ.



















