ಬೆಂಗಳೂರು, ಜೂ.15 www.bengaluruwire.com: ನಗರವು ಕೇವಲ ವಾಹನಗಳಿಗೆ ಸೀಮಿತವಲ್ಲ, ಅದು ಜನರಿಗಾಗಿಯೂ ಇರುವ ವ್ಯವಸ್ಥೆ. ಹೀಗಾಗಿ ಸುರಕ್ಷಿತ, ಗುಂಡಿ ಮುಕ್ತ ರಸ್ತೆಗಳು, ನಿರಂತರ ಫುಟ್ಪಾತ್ಗಳು ಮತ್ತು ಉತ್ತಮ ಸಾರ್ವಜನಿಕ ಸ್ಥಳಗಳ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಆನ್ಲೈನ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ನಗರದ ಮೂಲಸೌಕರ್ಯ ಹಾಗೂ ಪಾದಚಾರಿಗಳ ಹಕ್ಕುಗಳ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಗರದ ಪ್ರಸ್ತುತ ಟ್ರಾಫಿಕ್ ಸಮಸ್ಯೆ ಹಾಗೂ ಪಾದಚಾರಿಗಳ ಪರದಾಟವನ್ನು ವಿಶ್ಲೇಷಿಸಲಾಗಿದ್ದು, ಜನಸ್ನೇಹಿ ಬೆಂಗಳೂರು ನಿರ್ಮಾಣದ ಅಗತ್ಯತೆಯನ್ನು ಎತ್ತಿ ತೋರಿಸಲಾಗಿದೆ.
ಸಂಸದರ ಪ್ರಮುಖ ಬೇಡಿಕೆಗಳು:
- ಸ್ವಚ್ಛ ಹಾಗೂ ಗುಂಡಿ ಮುಕ್ತ ರಸ್ತೆಗಳ ನಿರ್ಮಾಣ.
- ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾದ ಮತ್ತು ನಿರಂತರ ಫುಟ್ಪಾತ್ಗಳ ವ್ಯವಸ್ಥೆ.
- ತಿಂಗಳಿಗೊಮ್ಮೆಯಾದರೂ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪಾದಚಾರಿಗಳಿಗೆ ಮುಕ್ತ ಅವಕಾಶ (ಓಪನ್ ಸ್ಟ್ರೀಟ್ಸ್) ಕಲ್ಪಿಸುವುದು.
ತಿಂಗಳಿಗೊಮ್ಮೆ ಆಯ್ದ ಪ್ರಮುಖ ರಸ್ತೆಗಳಲ್ಲಿ ವಾಕಿಂಗ್, ಸೈಕ್ಲಿಂಗ್ ಮತ್ತು ಸಮುದಾಯ ಚಟುವಟಿಕೆಗಳಿಗಾಗಿ ಓಪನ್ ಸ್ಟ್ರೀಟ್ಸ್ ಆಯೋಜಿಸುವುದನ್ನು ಬೆಂಬಲಿಸೋಣ ಎಂದು ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ. ಬೆಂಗಳೂರು ನಗರ ಉತ್ತಮ ಮೂಲಸೌಕರ್ಯಕ್ಕೆ ಅರ್ಹವಾಗಿದೆ ಎಂದು ನಂಬುವ ನಾಗರಿಕರಿಂದ ಕನಿಷ್ಠ 5 ಲಕ್ಷ ಸಹಿಗಳನ್ನು ಸಂಗ್ರಹಿಸುವ ಗುರಿಯನ್ನು ಈ ಆಂದೋಲನ ಹೊಂದಿದೆ.

ಸಾರ್ವಜನಿಕರಿಂದ ಸಂಗ್ರಹಿಸಲಾದ ಈ ಸಹಿ ಹಾಗೂ ಬೇಡಿಕೆಯ ಮನವಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಮೂಲಕ ಜಿಬಿಎ ಮತ್ತು ಸರ್ಕಾರದ ಮಟ್ಟದಲ್ಲಿ ಪಾದಚಾರಿ ಸ್ನೇಹಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಈ ಅಭಿಯಾನ ರೂಪಿಸಲಾಗಿದೆ.




















