ಬೆಂಗಳೂರು, ಸೆ.9 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ 2019-20ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿರುವಂತೆ ಮುಖ್ಯ ಲೆಕ್ಕಪರಿಶೋಧಕರು 1213 ಪ್ರಕರಣಗಳಲ್ಲಿ ಒಟ್ಟು 1,169 ಕೋಟಿ ರೂ. ಮೊತ್ತದ ಹಣಕ್ಕೆ ಆಕ್ಷೇಪಣೆ (Objection)ಯನ್ನು ವ್ಯಕ್ತಪಡಿಸಿದೆ.
ಈ ಆಕ್ಷೇಪಣೆ ಮಾಡಿದ ಲೆಕ್ಕಪರಿಶೋಧನಾ ಪ್ರಕರಣಗಳ ಪೈಕಿ ಹಳೆಯ ವಸೂಲಾತಿ ಪ್ರಕರಣಗಳು ಸೇರಿದಂತೆ 754 ಪ್ರಕರಣಗಳಲ್ಲಿ ಕೇವಲ 173.79 ಕೋಟಿಯಷ್ಟು ಹಣವನ್ನು ಮಾತ್ರ ಬಿಬಿಎಂಪಿಯ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವಸೂಲಿ ಮಾಡಿದ್ದಾರೆ. ಉಳಿದಂತೆ 995.70 ಕೋಟಿ ರೂ. ಮೊತ್ತದ ಹಣಕ್ಕೆ ಆಡಿಟ್ ನಲ್ಲಿ ಆಕ್ಷೇಪಣೆಯು ಮುಂದುವರೆದಿದೆ.
ವರ್ಷಂಪ್ರತಿ ಈ ಆಕ್ಷೇಪಣಾ ಮೊತ್ತವು ಕಡಿಮೆಯಾಗಬೇಕು. ಆದರೆ ಬಿಬಿಎಂಪಿಯಲ್ಲಿ ಸೂಕ್ತ ರೀತಿ ಲೆಕ್ಕಪತ್ರ ನಿರ್ವಹಣೆ ಮಾಡದ ಕಾರಣ ವರ್ಷದಿಂದ ವರ್ಷಕ್ಕೆ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆಗೆ ಒಳಪಡಿಸುವ ಮೊತ್ತ ಗಗನಕ್ಕೇರುತ್ತಿದೆ. ಪಾಲಿಕೆಯ ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಒಟ್ಟು 76 ಆಕ್ಷೇಪಣಾ ಕಂಡಿಕೆ (Pyara)ಗಳಲ್ಲಿ 758.84 ಕೋಟಿ ರೂ. ಮೊತ್ತ ಲೆಕ್ಕಪತ್ರ ವಿಚಾರದಲ್ಲಿ ಆಕ್ಷೇಪಣೆಗಳನ್ನು ಎತ್ತಲಾಗಿದೆ. ಇನ್ನು ಅದು ಬಿಟ್ಟರೆ ಕಾಮಗಾರಿ ಇಲಾಖೆಯಲ್ಲಿ 342 ಕಂಡಿಕೆಗಳಲ್ಲಿ 402.33 ಕೋಟಿ ರೂ. ಮೊತ್ತಕ್ಕೆ, ಕಂದಾಯ ಇಲಾಖೆಯಲ್ಲಿ 36 ಕಂಡಿಕೆಗಳಲ್ಲಿ 5.60 ಕೋಟಿ ರೂ. ಹಾಗೂ ಆರೋಗ್ಯ ಇಲಾಖೆಯ್ಲಿ 21 ಕಂಡಿಕೆಗಳಲ್ಲಿ 2.70 ಕೋಟಿ ರೂ. ಹಾಗೂ ಶಿಕ್ಷಣದಲ್ಲಿ 1 ಕಂಡಿಕೆಯಲ್ಲಿ 33,796 ರೂ. ನಷ್ಟು ಹಣಕ್ಕೆ ಬಿಬಿಎಂಪಿ ಮುಖ್ಯ ಲೆಕ್ಕಪರಿಶೋಧನಾಕಾರಿ ಕಚೇರಿ ಆಕ್ಷೇಪಣಾ ಮೊತ್ತವೆಂದು ಪರಿಗಣಿಸಿದೆ.

ಕಾಮಗಾರಿ ಶಾಖೆಯಲ್ಲಿ 832 ಪ್ರಕರಣದಲ್ಲಿ ಆಕ್ಷೇಪ :

ಇನ್ನು ಕಾಮಗಾರಿ ಶಾಖೆಯಲ್ಲಿ ಒಟ್ಟು 832 ಪ್ರಕರಣಗಳಲ್ಲಿ ವಿವಿಧ ಪಾವತಿ, ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ದೋಷ ಕುರಿತಂತೆ ಲೆಕ್ಕಪರಿಶೋಧಕರು ಆಕ್ಷೇಪಣೆ ಸಲ್ಲಿಸಿದ್ದು, ಕಾಮಗಾರಿ ಶಾಖೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗವೊಂದರಲ್ಲೇ 120 ಪ್ರಕರಣಗಳನ್ನು ಪಟ್ಟಿ ಮಾಡಿದೆ. ಮೂರು ಪ್ರಕರಣಗಳಲ್ಲಿ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಮುಟ್ಟುಗೋಲು ಹಾಕಿಕೊಂಡ 5.89 ಕೋಟಿ ರೂ. ಮೊತ್ತದ ಬ್ಯಾಂಕ್ ಗ್ಯಾರಂಟಿ ಮೊತ್ತವನ್ನು ಆಯುಕ್ತರ ಖಾತೆಗೆ ಜಮೆ ಮಾಡದಿರುವುದನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಜೊತೆಗೆ ಟೆಂಡರ್ ನಿಯಮಾವಳಿ ಉಲ್ಲಂಘಿಸಿ 6.75 ಕೋಟಿ ರೂ. ಮೊತ್ತದ ಕಸ ಗುಡಿಸುವ ಯಂತ್ರ ಖರೀದಿ ಹಾಗೂ ನಿರ್ವಹಣೆ ಕಾರ್ಯ ಕೈಗೊಂಡಿರುವುದಕ್ಕೆ ಆಡಿಟ್ ಆಕ್ಷೇಪಣೆ ಮಾಡಲಾಗಿತ್ತು. ಆ ಪೈಕಿ 3.60 ಕೋಟಿ ರೂ. ಹಣವನ್ನಷ್ಟೇ ಪಾಲಿಕೆ ಅಧಿಕಾರಿಗಳು ವಸೂಲಾತಿ ಮಾಡಲು ಸಾಧ್ಯವಾಗಿದೆ. ಇದಲ್ಲದೆ ಕಡಿಮೆ ದಂಡ ವಸೂಲಿ, ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ ಸುರಕ್ಷಾ ಸಾಮಗ್ರಿಗಳನ್ನು ಖರೀದಿಸಿರುವುದು. ವಸೂಲಿ ಮಾಡಿದ ದಂಡದ ಮೊತ್ತಕ್ಕೆ ಪೂರ್ಣವಾಗಿ ರಸೀದಿ ಪುಸ್ತಕಗಳನ್ನು ಹಾಜರುಪಡಿಸದಿರುವುದು, ಒಂದೇ ತಿಂಗಳಲ್ಲಿ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಪಾವತಿ ವೋಚರ್ ಗಳಲ್ಲಿ ಒಂದೇ ವಾಹನಕ್ಕೆ ಎರಡು ಬಾರಿ ಬಿಲ್ ಕ್ಲೈಮ್ ಮಾಡಿರುವುದು ಸೇರಿದಂತೆ ಹಲವು ನ್ಯೂನ್ಯತೆಗಳನ್ನು ಆಡಿಟ್ ರಿಪೋರ್ಟ್ ಎತ್ತಿ ತೋರಿಸಿದೆ.
6 ಹೊಸ ಆಂಬುಲೆನ್ಸ್ ವಾಹನಗಳ ಫ್ಯಾಬ್ರಿಕೇಷನ್ ದಾಖಲೆ ಹಾಜರುಪಡಿಸಿಲ್ಲ :
ಅದೇ ರೀತಿ ತುಟ್ಟಿಭತ್ಯೆ ಬಾಕಿ ಪಾವತಿ ಸಂಬಂಧ ಯಾವುದ ದಾಖಲೆಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದು, ಪಾಲಿಕೆಯ 6 ಹೊಸ ಆಂಬುಲೆನ್ಸ್ ವಾಹನಗಳಿಗೆ ಫ್ಯಾಬ್ರಿಕೇಷನ್ ಕಾರ್ಯ ನಿರ್ವಹಿಸಿರುವ ಕಾಮಗಾರಿಗಳಲ್ಲಿ ನ್ಯೂನ್ಯತೆ ಕಂಡುಬಂದಿರುವುದನ್ನು ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬ್ಯಾಂಕ್ ಖಾತೆ ಮೇಲೆ ಶೇಖರಣೆಯಾದ ಬಡ್ಡಿ ಮೊತ್ತವನ್ನು ಪಾಲಿಕೆಯ ಆಯುಕ್ತರ ಸ್ವೀಕೃತಿ ಖಾತೆಗೆ ಜಮೆ ಮಾಡದಿರುವುದು. ಕಾಮಗಾರಿ ಶಾಖೆಯ ಕೇಂದ್ರ ಯೋಜನೆಯ ಎಂಪಿಇಡಿನಲ್ಲಿ 9.70 ಕೋಟಿ ರೂ. ಮೊತ್ತದ ಟೆಂಡರ್ ಕಾಮಗಾರಿಗೆ ಟೆಂಡರ್ ಸಲ್ಲಿಸಲು ನಿಗದಿಪಡಿಸಲಾದ ಕನಿಷ್ಠ ಸಮಯ ಪಾಲಿಸದಿರುವುದಕ್ಕೂ ಲೆಕ್ಕಪರಿಶೋಧಕರು ಆಕ್ಷೇಪಣೆಯನ್ನು ಹಾಕಿದ್ದಾರೆ.
ಏಕ ಬಿಡ್ ಟೆಂಡರ್ ನಲ್ಲಿ ಅನುಮೋದಿತ ಮೊತ್ತಕ್ಕಿಂತ ಹೆಚ್ಚಿನ ಪಾವತಿ :
ಇನ್ನು ಕೇಂದ್ರ ಯೋಜನೆಯ ಎಂಪಿಇಡಿನಲ್ಲಿ ಇ-ಸಂಗ್ರಹಣೆ ಮೂಲಕ ಕೈಗೊಂಡಿರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಏಕ ಬಿಡ್ ಟೆಂಡರ್ ಗಳನ್ನು ಅನುಮೋದನೆ ನೀಡಿ, ಅನುಮೋದಿತ ಮೊತ್ತಕ್ಕಿಂತ ಹೆಚ್ಚಿಗೆ ಪಾವತಿಸಿರುವ ಪ್ರಕರಣದಲ್ಲಿ 5.88 ಕೋಟಿ ರೂ. ಮೊತ್ತಕ್ಕೆ ಆಡಿಟ್ ಅಬ್ಜೆಕ್ಷನ್ ಹಾಕಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಯೋಜನೆಯ ಕಾರ್ಯಪಾಲಕ ಅಭಿಯಂತರರ ಕಚೇರಿ ಕೈಗೊಂಡಿರುವ ಕಾಮಗಾರಿ ಅಪೂರ್ಣವಾಗಿದ್ದು, ಈಗಾಗಲೇ ಭರಿಸಿದ ವೆಚ್ಚ ಫಲಪ್ರದವಾಗಿಲ್ಲ ಎಂದು 15.47 ಲಕ್ಷ ರೂ.ಗಳ ಮೊತ್ತಕ್ಕೆ ಆಕ್ಷೇಪಣೆ ಹಾಕಲಾಗಿದೆ. ಸಾರ್ವಜನಿಕ ಶೌಚಾಲಯದ ನೆಲ ಬಾಡಿಗೆ ವಸೂಲಿ ಮಾಡದಿರುವುದು, ನಕ್ಷೆ ಮಂಜೂರಾತಿ ಅಧಿಕಾರ ಹಿಂಪಡೆದ ನಂತರವೂ ನಕ್ಷೆಗಳಿಗೆ ಮಂಜೂರಾತಿ ನೀಡಿರುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಲೆಕ್ಕಪರಿಶೋಧಕರು ನ್ಯೂನ್ಯತೆ, ಕ್ರಿಯಾ ಲೋಪ, ದಾಖಲೆ ಹಾಜರುಪಡಿಸದಿರುವುದು ಸೇರಿದಂತೆ ಹಲವು ತಪ್ಪುಗಳನ್ನು ಬಹಿರಂಗಪಡಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ 343 ಪ್ರಕರಣಗಳಲ್ಲಿ ಆಕ್ಷೇಪಣೆ :
ಬಿಬಿಎಂಪಿಯ ಕಂದಾಯ ಇಲಾಖೆಯು ಪಾಲಿಕೆಗೆ ಸಂಪನ್ಮೂಲ ಸಂಗ್ರಹ ವಿಚಾರದಲ್ಲಿ ಪ್ರಮುಖ ಕೊಂಡಿಯಾಗಿದೆ. ಸಾರ್ವಜನಿಕರಿಂದ ಆಸ್ತಿ ತೆರಿಗೆ ಮತ್ತಿತರ ವಿಚಾರದಲ್ಲಿ ಕಂದಾಯ ಸಂಗ್ರಹ ಜವಾಬ್ದಾರಿ ಹೊಂದಿರುವ ಈ ಇಲಾಖೆಯಲ್ಲಿ ಭ್ರಷ್ಟಾಚಾರ ಎನ್ನುವುದು ಹಾಸು ಹೊಕ್ಕಾಗಿದೆ. ಹಾಗಾಗಿ ಈ ಕಂದಾಯ ಇಲಾಖೆಯಲ್ಲಿ ದಾಖಲೆ ಸಂಗ್ರಹ, ಲೆಕ್ಕಪತ್ರ ನಿರ್ವಹಣೆಯಲ್ಲಿ ಒಂದಕ್ಕೊಂದು ತಾಳಮೇಳ ಸರಿಯಾಗಿರುವುದಿಲ್ಲ. ಚಿಕ್ಕಪೇಟೆ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಬಿಬಿಎಂಪಿ ಆಸ್ತಿಗಳ ಬಾಡಿಗೆ ಅಥವಾ ಗುತ್ತಿಗೆಯ ಡಿಸಿಬಿ ವಹಿಯನ್ನೇ ಸರಿಯಾಗಿ ನಿರ್ವಹಿಸಿಲ್ಲ ಎಂದು ಲೆಕ್ಕಪರಿಶೋಧಕರು ಆಕ್ಷೇಪಿಸಿದ್ದಾರೆ.

8.41 ಕೋಟಿ ರೂ. ಮೊಬೈಲ್ ಟವರ್ ತೆರಿಗೆ ವಸೂಲಿ ಮಾಡಿಲ್ಲ :
ಶಾಲಾ ಕಾಲೇಜುಗಳಿಂದ ಆಸ್ತಿ ತೆರಿಗೆ ಸೇವಾ ಶುಲ್ಕ ಬಾಕಿಯಿರುವ ಬಗ್ಗೆ, 64 ಸಹಾಯಕ ಕಂದಾಯ ಅಧಿಕಾರಿಗಳ ಉಪವಿಭಾಗಗಳಲ್ಲಿ 8.41 ಕೋಟಿ ರೂ. ಮೊತ್ತದಷ್ಟು ಮೊಬೈಲ್ ಟವರ್ ಗಳಿಂದ ತೆರಿಗೆ ವಸೂಲಿ ಮಾಡಿಲ್ಲ ಹಾಗೂ ಡಿಸಿ ಬಿಲ್ ವಹಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಗಂಭೀರ ಲೋಪವನ್ನು ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.19 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಸುಧಾರಣಾ ವೆಚ್ಚ ಪಡೆಯದೇ ಹಾಗೂ ಕಡಿಮೆ ಹಣ ಪಡೆದುಕೊಳ್ಳಲಾಗಿದೆ. ಹಾಗಾಗಿ 9.04 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. ಪಾಲಿಕೆಯ ವಿವಿಧ ವಲಯಗಳಲ್ಲಿನ 27 ಕಂದಾಯ ಉಪ ವಿಭಾಗಗಳಲ್ಲಿ 1.27 ಕೋಟಿ ರೂ. ಮೊತ್ತದಷ್ಟು ವಸತಿ ಮತ್ತು ವಸತಿಯೇತರ ಕಟ್ಟಡಗಳಿಗೆ ಕಡಿಮೆ ಆಸ್ತಿ ತೆರಿಗೆ ನಿಗದಿಪಡಿಸಿರುವುದನ್ನು ಲೆಕ್ಕಪರಿಶೋಧಕರ ತಂಡ ಪತ್ತೆ ಹಚ್ಚಿದೆ.
ಸಾಮಾನ್ಯ ಆಡಳಿತದಲ್ಲಿ 163 ಪ್ರಕರಣಗಳಲ್ಲಿ ಆಕ್ಷೇಪ :
ಸಾಮಾನ್ಯ ಆಡಳಿತದಲ್ಲಿ ಒಟ್ಟು 163 ಪ್ರಕರಣಗಳಲ್ಲಿ ಆಕ್ಷೇಪಣೆ ವ್ಯಕ್ತಪಡಿಸಲಾಗಿದೆ. ವೇತನ ಬಿಲ್ಲು ಮತ್ತು ಘನತ್ಯಾಜ್ಯ ನಿರ್ವಹಣೆ ಪಾವತಿ ಬಿಲ್ಲುಗಳಲ್ಲಿ ಕಡಿತ ಮಾಡಿದ ವೃತ್ತಿ ತೆರಿಗೆ (Professional Tax), ಭವಿಷ್ಯ ನಿಧಿ ವಂತಿಕೆ (Provident Fund) ಹಾಗೂ ಇಎಸ್ಐ (ESI) ಇನ್ ಸ್ಟಾಲ್ ಮೆಂಟ್ ಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಜಮೆ ಮಾಡದಿರುವುದು, ಒಬ್ಬರೇ ಫಲಾನುಭವಿಗೆ ಎರಡು ಬಾರಿ ಸಹಾಯಧನ ನೀಡಿರುವುದು, ಬ್ಯಾಂಕ್ ಖಾತೆಗಳಿಂದ ಬಂದಿರುವ ಬಡ್ಡಿ ಮೊತ್ತವನ್ನು ಪಾಲಿಕೆಯ ಖಾತೆಗೆ ವರ್ಗಾವಣೆ ಮಾಡದಿರುವುದು, ಕಾಮಗಾರಿ ಹಾಗೂ ಸಾದಿಲ್ವಾರು ಬಿಲ್ ಗಳ ಪಾವತಿಯಲ್ಲಿ ಹೆಚ್ಚುವರಿ ಪಾವತಿ ಮಾಡಿರುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟವಾಗಿರುವುದು ಇತ್ಯಾದಿ ಅಂಶಗಳನ್ನು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಇಲಾಖೆಯಲ್ಲಿ 25 ಪ್ರಕರಣಗಳ ಬಗ್ಗೆ ಆಕ್ಷೇಪಣೆ :
ಆರೋಗ್ಯ ಇಲಾಖೆಯ ವಿವಿಧ 25 ಪ್ರಕರಣಗಳಲ್ಲಿ ಉದ್ದಿಮೆ ಪರವಾನಗಿ ನೀಡುವುದರಲ್ಲಿ ಡಿಸಿಬಿಲ್ ವಿವರ ಇಡದಿರುವುದು, ಆ ಕುರಿತ ಕಡತ ಹಾಗೂ ದಾಖಲೆಗಳನ್ನು ಹಾಜರುಪಡಿಸದಿರುವ ಪ್ರಕರಣಗಳು ಕಂಡು ಬಂದಿದೆ.
ಶಿಕ್ಷಣ ಇಲಾಖೆಯಲ್ಲಿ 4 ಪ್ರಕರಣಗಳಲ್ಲಿ ಆಕ್ಷೇಪಣೆ :
ಶಿಕ್ಷಣ ಇಲಾಖೆಯಲ್ಲಿ ಒಟ್ಟು 4 ಪ್ರಕರಣಗಳಲ್ಲಿ ಆಕ್ಷೇಪಣೆಯನ್ನು ಲೆಕ್ಕ ಪರಿಶೋಧಕರು ಎತ್ತಿದ್ದು, ಆಸ್ಟಿನ್ ಟೌನ್ ಬಾಲಕಿಯರ ಪಾಲಿಕೆ ಪದವಿ ಪೂರ್ವ ಕಾಲೇಜಿನಲ್ಲಿ ವಸೂಲಿಯಾದ ಶುಲ್ಕವನ್ನು ಬ್ಯಾಂಕಿಗೆ ಕಡಿಮೆ ಜಮೆ ಮಾಡಿರುವುದು, ಶಾಲೆ ಕಾಲೇಜುಗಳ ದಿನನಿತ್ಯದ ಆಡಳಿತಕ್ಕೆ ಅಗತ್ಯವಾದ ಮುದ್ರಣ ಸಾಮಗ್ರಿಗಳ ಬಾಬ್ತು ಕೊಟೇಷನ್ ಗಳನ್ನು ಆಹ್ವಾನಿಸದಿರುವುದು ಸೇರಿದಂತೆ ವಿವಿಧ ಆಕ್ಷೇಪಣೆಗಳನ್ನು ಉಲ್ಲೇಖಿಸಿದೆ. ಇನ್ನು ರಸ್ತೆ ಮೂಲಸೌಕರ್ಯ ವಿಭಾಗದ 6 ಪ್ರಕರಣಗಳಲ್ಲಿ ಅಂದಾಜು ಪಟ್ಟಿಯಲ್ಲಿ ಎಸ್.ಆರ್.ದರಗಳಿಗಿಂತ ಹೆಚ್ಚುವರಿ ದರ ಅಳವಡಿಸಿಕೊಂಡು ಕಾಮಗಾರಿ ನಿರ್ವಹಿಸಿರುವ ಪ್ರಕರಣದಲ್ಲಿ 22.09 ಲಕ್ಷ ರೂ. ಹಣ ವಸೂಲಾಗಿರುವುದನ್ನು ವರದಿಯಲ್ಲಿ ತಿಳಿಸಿದೆ. ಸ್ಟೂಪ್ ಕನ್ಸಲ್ಟೆಂಡ್ ರವರನ್ನು ಡಿಪಿಆರ್ ತಯಾರಿಸಲು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವುದಕ್ಕೆ 14.41 ಲಕ್ಷ ರೂ. ಹಣಕ್ಕೆ ಆಕ್ಷೇಪಣೆಯನ್ನು ವ್ಯಕ್ತಪಡಿಸಲಾಗಿದೆ.
ಬಿಬಿಎಂಪಿಯಲ್ಲಿ ಲೆಕ್ಕ ನಿರ್ವಹಣಾ ಪದ್ಧತಿಯನ್ನೇ ಇದುವರೆಗೆ ಅಳವಡಿಸಿಕೊಂಡಿಲ್ಲ !! :
“ರಾಜ್ಯ ಸರ್ಕಾರ 1ನೇ ಏಪ್ರಿಲ್ 2006ರಿಂದ ರಾಜ್ಯದಲ್ಲಿ ಕರ್ನಾಟಕ ಮುನಿಸಿಪಾಲಿಟೀಸ್ ಅಕೌಂಟಿಂಗ್ ಅಂಡ್ ಬಜೆಟಿಂಗ್ ರೂಲ್ಸ್ 2006ರ ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಕರ್ನಾಟಕ ಮುನಿಸಿಪಲ್ ಕಾಯ್ದೆ 1964ರ ಅನ್ವಯ ಸ್ಥಾಪಿತವಾದ ಎಲ್ಲಾ ಪುರಸಭೆ ಹಾಗೂ ನಗರ ಸಭೆಗಳಿಗೆ ಅನ್ವಯಗೊಳಿಸಿದೆ. 3-05-2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ನಗರ ಪಾಲಿಕೆಗಳಿಗೆ 01-04-2006ರಿಂದಲೇ ಪೂರ್ವಾನ್ವಯವಾಗುವಂತೆ ಜೊರಿಗೊಳಿಸಲಾಗಿದೆ.”
“ಆದರೆ ಬಿಬಿಎಂಪಿಯಲ್ಲಿ ಈ ನಿಯಮಗಳನ್ನು ಅನ್ವಯಗೊಳಿಸದಿರುವುದರಿಂದ ಹಾಗೂ ಪಾಲಿಕೆ ಕೂಡ ಕೆಎಂಸಿ ಕಾಯ್ದೆ 1976ರ ವಿಧಿ 422ರ ಅನ್ವಯ ಕ್ರಮ ಕೈಗೊಂಡು ಯಾವುದೇ ಲೆಕ್ಕಪತ್ರ ಪದ್ಧತಿಯನ್ನು ಜಾರಿಗೆ ತಂದಿಲ್ಲ. ಹೀಗಾಗಿ ಬಿಬಿಎಂಪಿಯಲ್ಲಿ ಯಾವುದೇ ಲೆಕ್ಕಪತ್ರ ಪದ್ಧತಿ ಇಲ್ಲದಂತಾಗಿದೆ. ಇದರಿಂದಾಗಿ ಕೆಎಂಸಿ ಕಾಯ್ದೆ ಜಾರಿಗೆ ಬಂದು ಹಲವು ವರ್ಷಗಳೇ ಕಳೆದರೂ ಲೆಕ್ಕ ನಿರ್ವಹಣಾ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಲು ಪಾಲಿಕೆ ವಿಫಲವಾಗಿದೆ” ಎಂದು ಆಡಿಟ್ ವರದಿಯಲ್ಲಿ ಗಂಭೀರವಾದ ಅಭಿಪ್ರಾಯವನ್ನು ಉಲ್ಲೇಖಿಸಲಾಗಿದೆ.
ಇಷ್ಟೆಲ್ಲಾ ಲೋಪ, ನ್ಯೂನ್ಯತೆಗಳನ್ನು ಲೆಕ್ಕಪರಿಶೋಧನಾಧಿಕಾರಿ ಕಚೇರಿ ಗುರ್ತಿಸಿದ್ದರೂ ಪ್ರತಿವರ್ಷ ಎಂದಿಂತೆ 1,169 ಕೋಟಿ ರೂ. ಆಕ್ಷೇಪಣಾ ಮೊತ್ತ ಮತ್ತಷ್ಟು ಏರಿಕೆಯಾಗುತ್ತದೆ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕಾನೂನು ರೀತ್ಯ ಪಾಲಿಕೆಯಲ್ಲಿ ಸೂಕ್ತ ರೀತಿ ಲೆಕ್ಕ ನಿರ್ವಹಣಾ ಪದ್ಧತಿ ನಿಯಮಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ವಲಯದಿಂದ ವ್ಯಕ್ತವಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



















