ಬೆಂಗಳೂರು, ಅ.15 www.bengaluruwire.com: ದ್ವೈತ ಸಿದ್ಧಾಂತದ ಪ್ರತಿಪಾದಕರು ಹಾಗೂ ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಇನ್ಮುಂದೆ ಪ್ರತಿವರ್ಷ ಅಧಿಕೃತವಾಗಿ ಆಚರಿಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರತಿವರ್ಷ ಅಕ್ಟೋಬರ್ 21ರಂದು ರಾಜ್ಯಾದ್ಯಂತ ಶ್ರೀ ಮಧ್ವಾಚಾರ್ಯ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಅಧಿಕೃತ ಆದೇಶ (ಸಂಖ್ಯೆ: ಕಸಂವಾ 354 ಕಸಧ 2026, ದಿನಾಂಕ: 14.10.2026) ಹೊರಡಿಸಿದ್ದಾರೆ.
ಸರ್ಕಾರದ ಆದೇಶದಲ್ಲೇನಿದೆ?:
ಶ್ರೀ ಮಧ್ವಾಚಾರ್ಯರ ತತ್ತ್ವ, ವಿಚಾರಧಾರೆ ಹಾಗೂ ಆದರ್ಶಗಳನ್ನು ಪ್ರಚಾರಪಡಿಸುವ ಸಲುವಾಗಿ, ಅವರ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಅಧಿಕೃತವಾಗಿ ಆಚರಿಸಬೇಕೆಂದು ಗೃಹ ಸಚಿವರ ನಡವಳಿ ಹಾಗೂ ಕಲಬುರಗಿ ಜಿಲ್ಲಾ ಬ್ರಾಹ್ಮಣ ಸಂಘ, ಸತ್ಯಾತ್ಮಸೇನಾ ವಿವಿಧೋದ್ದೇಶ ಸೇವಾ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 33 ವಿವಿಧ ಮಹನೀಯರು/ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಇದೀಗ ಆ ಪಟ್ಟಿಗೆ ಶ್ರೀ ಮಧ್ವಾಚಾರ್ಯರ ಜಯಂತಿಯೂ ಸೇರ್ಪಡೆಗೊಂಡಿದೆ. ಈ ಆಚರಣೆಯ ವೆಚ್ಚವನ್ನು 2026-27ನೇ ಸಾಲಿನ ಮಹಾಪುರುಷರ ಜಯಂತಿಗಳ ಆಚರಣೆ ಅನುದಾನದಿಂದ ಭರಿಸಲು ನಿರ್ಧರಿಸಲಾಗಿದೆ.
ವಿಚಾರ ಸಂಕಿರಣ, ಉಪನ್ಯಾಸಗಳ ಆಯೋಜನೆ:
ಶ್ರೀ ಮಧ್ವಾಚಾರ್ಯರ ಜೀವನ, ತತ್ತ್ವಶಾಸ್ತ್ರ ಮತ್ತು ಅವರ ಅಪಾರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜಯಂತಿಯ ಅಂಗವಾಗಿ ವಿಚಾರ ಸಂಕಿರಣ, ಉಪನ್ಯಾಸ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.
ಸಂಘಟನೆಗಳಿಂದ ಹರ್ಷ:
ರಾಜ್ಯ ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವಿವಿಧ ಜಿಲ್ಲಾ ಬ್ರಾಹ್ಮಣ ಸಂಘಗಳು ಹಾಗೂ ಮಧ್ವ ಭಕ್ತ ಸಮೂಹ ತುಂಬು ಹೃದಯದಿಂದ ಸ್ವಾಗತಿಸಿ, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿವೆ.


















