ನವದೆಹಲಿ, ಅ.15 www.bengaluruwire.com: ದೇಶದ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ವರ್ಷಗಳಿಂದ ಕೊಳೆಯುತ್ತಿರುವ ಲಕ್ಷಾಂತರ ಕ್ರಿಮಿನಲ್ ಮೊಕದ್ದಮೆಗಳಿಗೆ ಮುಕ್ತಿ ನೀಡಲು ಕೇಂದ್ರ ಸರ್ಕಾರ ಬೃಹತ್ ಹೆಜ್ಜೆಯಿಟ್ಟಿದೆ.
ದೇಶಾದ್ಯಂತದ ನ್ಯಾಯಾಲಯಗಳಲ್ಲಿ 5.8 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದು, ಇವುಗಳಲ್ಲಿ ಬಹುಪಾಲು ಪ್ರಕರಣಗಳು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿವೆ. ಅಲ್ಲದೆ, ಗುರುತಿಸಲಾದ 100 ಜಿಲ್ಲೆಗಳಲ್ಲೇ ಜಿಲ್ಲಾ ನ್ಯಾಯಾಲಯಗಳ ಒಟ್ಟು ಬಾಕಿ ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವು ಇವೆ.
ಪ್ರಕರಣಗಳ ಬಾಕಿ ಪ್ರಮಾಣ ಅತಿ ಹೆಚ್ಚಿರುವ ದೇಶದ 100 “ಹಾಟ್ಸ್ಪಾಟ್” ಜಿಲ್ಲೆಗಳನ್ನು ಗುರುತಿಸಿರುವ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಈ ಪ್ರಕರಣಗಳ ತ್ವರಿತ ವಿಲೇವಾರಿಗೆ ದೇಶದ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ (NLUs) ನೆರವು ಪಡೆಯಲು ಮಹತ್ವದ ಯೋಜನೆ ರೂಪಿಸಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ನೇತೃತ್ವದಲ್ಲಿ 16 ರಾಜ್ಯಗಳ 19 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ನಡೆದ ಉನ್ನತ ಮಟ್ಟದ ವಿಡಿಯೋ ಕಾನ್ಫರೆನ್ಸ್ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ನ್ಯಾಯಾಂಗ ಇಲಾಖೆ, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR&D) ಹಾಗೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

100 ಜಿಲ್ಲೆಗಳಲ್ಲೇ ಇದೆ ಅರ್ಧಕ್ಕೂ ಹೆಚ್ಚು ಬಾಕಿ ಕೇಸ್ಗಳು:
ದೇಶದ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಒಟ್ಟು ಪ್ರಕರಣಗಳಲ್ಲಿ ಶೇಕಡಾ 50ಕ್ಕೂ ಹೆಚ್ಚು ಪ್ರಕರಣಗಳು ಕೇವಲ ಈ 100 ಹಾಟ್ಸ್ಪಾಟ್ ಜಿಲ್ಲೆಗಳಲ್ಲೇ ಕೇಂದ್ರೀಕೃತವಾಗಿರುವುದು ಆತಂಕಕಾರಿ ಸಂಗತಿ. ಈ ವಿಳಂಬವು ಕೇವಲ ನ್ಯಾಯದಾನ ಪ್ರಕ್ರಿಯೆಯನ್ನು ಕುಂಠಿತಗೊಳಿಸದೆ, ಕಕ್ಷಿದಾರರಿಗೆ ಆರ್ಥಿಕ ಹೊರೆಯಾಗುವುದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತಿದೆ.
ಕಾನೂನು ವಿದ್ಯಾರ್ಥಿಗಳು ಹಾಗೂ ಸಂಶೋಧಕರ ನೆರವು:
ಕೇಂದ್ರದ ಹೊಸ ಕಾರ್ಯತಂತ್ರದ ಪ್ರಕಾರ, ಕಾನೂನು ವಿಶ್ವವಿದ್ಯಾಲಯಗಳು ಸಂಶೋಧನಾ ಮತ್ತು ಸಲಹಾ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಿವೆ.
ಡೇಟಾ ಆಧಾರಿತ ವಿಶ್ಲೇಷಣೆ: ಪ್ರತಿ ಜಿಲ್ಲೆಯ ವಿಶಿಷ್ಟ ಸವಾಲುಗಳು ಮತ್ತು ಪ್ರಕರಣಗಳು ವಿಳಂಬವಾಗಲು ನಿಖರ ಕಾರಣಗಳನ್ನು ಕಾನೂನು ತಜ್ಞರು ಹಾಗೂ ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ.
ಪ್ರೊ ಬೋನೋ ವಿಭಾಗಗಳ ಬಳಕೆ: ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ವಿವಿಗಳ ‘ಪ್ರೊ ಬೋನೋ’ (ಉಚಿತ ಕಾನೂನು ಸೇವೆ) ವಿಭಾಗಗಳು ಮತ್ತು ಸಂಶೋಧಕ ವಿದ್ಯಾರ್ಥಿಗಳನ್ನು ಈ ಮಿಷನ್ಗೆ ಬಳಸಿಕೊಳ್ಳಲಾಗುತ್ತದೆ.
ತ್ವರಿತ ವಿಚಾರಣೆ ಹಾಗೂ ಪ್ಲೀ ಬಾರ್ಗೇನಿಂಗ್: ಸಣ್ಣಪುಟ್ಟ ಕೇಸ್ಗಳ ಶೀಘ್ರ ಇತ್ಯರ್ಥಕ್ಕೆ ಸಮ್ಮರಿ ಟ್ರಯಲ್, ಅನಗತ್ಯ ಮುಂದೂಡಿಕೆ (Adjournments) ತಡೆಗಟ್ಟುವಿಕೆ ಮತ್ತು ಪ್ಲೀ ಬಾರ್ಗೇನಿಂಗ್ (Plea Bargaining) ಪರಿಣಾಮಕಾರಿ ಬಳಕೆಗೆ ಶಿಫಾರಸುಗಳನ್ನು ಸಿದ್ಧಪಡಿಸಲಾಗುತ್ತದೆ.
ಸಾಮಾನ್ಯ ನಾಗರಿಕರಿಗೆ ಶೀಘ್ರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶೈಕ್ಷಣಿಕ ಪರಿಣತಿ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಬೆಸೆಯುವ ಈ ಉಪಕ್ರಮವು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನವೀನ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದು ನಿರೀಕ್ಷಿಸಲಾಗಿದೆ.


















